ಹೊಸದಿಲ್ಲಿ, ಜ.23: ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ಏಳು ದಿನಗಳ ಒಳಗಾಗಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಕೆಗೆ ಸಮಯ ಮಿತಿ ವಿಧಿಸುವಂತೆ ಇರಬೇಕು. ಇದರ ಜತೆಗೆ ತೀರ್ಪಿನ ಮರು ಪರಿಶೀಲನಾ ಅರ್ಜಿ ಮತ್ತು ಕ್ಯುರೇಟಿವ್ ಪಿಟಿಷನ್ ಸಲ್ಲಿಕೆಯ ಬಗ್ಗೆ ಕೂಡ ಸಮಯ ನಿಗದಿ ಮಾಡಬೇಕು ಎಂದು ಬುಧವಾರ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದೆ. ಕೇಂದ್ರ ಗೃಹ ಖಾತೆ ವತಿಯಿಂದಲೇ ಈ ಕೋರಿಕೆ ಮಂಡನೆಯಾಗಿದೆ.
2012ರ ನಿರ್ಭಯಾ ಗ್ಯಾಂಗ್‌ರೇಪ್ ಆರೋಪಿಗಳಿಗೆ ಈಗಾಗಲೇ ಘೋಷಣೆಯಾಗಿರುವ ಗಲ್ಲು ಶಿಕ್ಷೆ ಜಾರಿ ಮಾಡುವಲ್ಲಿ ಸಾಕಷ್ಟು ವಿಳಂಬವಾಗಿದೆ. ಹೀಗಾಗಿ ಆಕೆಯ ಹೆತ್ತವರು ಮತ್ತು ದೇಶಾದ್ಯಂತ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವ ಕಾರಣದಿಂದ ಕೇಂದ್ರ ಸರ್ಕಾರದ ಮನವಿಗೆ ಮಹತ್ವ ಬಂದಿದೆ.
ಸದ್ಯ ಇರುವ ನಿಯಮಗಳನ್ನು ಉಪಯೋಗ ಮಾಡಿಕೊಂಡು ತಪ್ಪಿತಸ್ಥರು ಶಿಕ್ಷೆ ಜಾರಿಯನ್ನು ಮುಂದೂಡಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಎಲ್ಲಾ ರೀತಿಯ ಅರ್ಜಿಗಳ ವಿಲೇವಾರಿಗೆ ಏಳು ದಿನಗಳ ಅವಧಿ ನಿಗದಿ ಮಾಡಬೇಕು ಎಂದು ಕೋರಿಕೊಂಡಿದೆ. ಅಪರಾಧಿಗಳ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡ ಏಳು ದಿನಗಳ ಒಳಗಾಗಿ ಡೆತ್ ವಾರಂಟ್ ಹೊರಡಿಸುವ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಜೈಲಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕೇಂದ್ರ ಒತ್ತಾಯಿಸಿದೆ. 2014ರಲ್ಲಿ ಶತ್ರುಘ್ನ ಚೌಹಾಣ್ ಎಂಬಾತನ ಪ್ರಕರಣದಲ್ಲಿ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡ 14 ದಿನಗಳ ಬಳಿಕ ಶಿಕ್ಷೆ ಜಾರಿ ಮಾಡಬೇಕು ಎಂದು ನೀಡಿದ್ದ ಆದೇಶವನ್ನು ಬದಲು ಮಾಡಬೇಕೆಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಅರಿಕೆ ಮಾಡಿದೆ.
ಬಹಳಷ್ಟು ಚರ್ಚೆಗೆ ಗುರಿಯಾಗಿರುವ ನಿರ್ಭಯಾ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕೃತವಾಗಿದೆ. ಕಳೆದ ವಾರ ನವದೆಹಲಿಯ ಸ್ಥಳೀಯ ಕೋರ್ಟ್ ಫೆ.1ರಂದು ಬೆಳಗ್ಗೆ ಆರು ಗಂಟೆಗೆ ನಾಲ್ಕೂ ಮಂದಿಯನ್ನು ಗಲ್ಲಿಗೆ ಏರಿಸುವ ಬಗ್ಗೆ ಆದೇಶ ಹೊರಡಿಸಿತ್ತು.