ಹೊಸದಿಲ್ಲಿ, ಡಿ.24: ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎನ್ಆರ್ ಸಿ ಜಾರಿಗೆ ಹಿಂದೇಟು ಹಾಕಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚಿ ಹೊರದಬ್ಬಲು 2024ರೊಳಗೆ ಕೇಂದ್ರ ಸರಕಾರ ದೇಶಾದ್ಯಂತ ಹಂತಹಂತವಾಗಿ ಎನ್‌ಆರ್‌ಸಿ ಜಾರಿಗೆ ತಂದೇ ತೀರುತ್ತದೆ ಎಂದು ಗುಡುಗಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ. ನಡ್ಡಾ ಸಹಿತ ಬಿಜೆಪಿಯ ಘಟಾನುಘಟಿ ನಾಯಕರು ಇದೇ ರೀತಿ ಹೇಳಿಕೆ ನೀಡಿದ್ದರು.
ಮುಂದೆ ಬರುವ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ 2024 ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು, ಎನ್ಆರ್ ಸಿ ಜಾರಿಯ ಬಗ್ಗೆ ಮಾತನಾಡದೇ ಇರಲು ಬಿಜೆಪಿ ನಿರ್ಧರಿಸಿದೆ. ರವಿವಾರ ದಿಲ್ಲಿಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರೇ ಎನ್‌ಆರ್‌ಸಿಯನ್ನು ರಾಷ್ಟ್ರವ್ಯಾಪಿ ಜಾರಿಗೊಳಿಸುವ ಬಗ್ಗೆ ತಮ್ಮ ಸರಕಾರದ ಮಟ್ಟದಲ್ಲಿ ಚರ್ಚೆಗಳೇ ನಡೆದಿಲ್ಲ ಎಂದು ಹೇಳುವ ಮೂಲಕ ಈ ವಿಚಾರದಲ್ಲಿ ಮೌನವಹಿಸುವಂತೆ ಪಕ್ಷದ ನಾಯಕರಿಗೆ ಸಂದೇಶ ರವಾನಿಸಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ.