ಹೊಸದಿಲ್ಲಿ, ಡಿ.16: ಉನ್ನಾವೊ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಉತ್ತರಪ್ರದೇಶ ಬಿಜೆಪಿಯ ಮಾಜಿ ಶಾಸಕ ಕುಲ್ ದೀಪ್ ಸಿಂಗ್ ಸೆಂಗಾರ್ ದೋಷಿ ಎಂದು ದಿಲ್ಲಿಯ ತೀಸ್ ಹಜಾರಿ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಿದೆ.
ಎರಡು ವರ್ಷದ ಹಿಂದಿನ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಿಜೆಪಿ ಉಚ್ಛಾಟಿಸಿದ ಶಾಸಕ ಕುಲ್‌ದೀಪ್ ದೋಷಿ ಎಂದು ತೀರ್ಪು ನೀಡಿರುವ ಕೋರ್ಟ್, ಮಂಗಳವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿದೆ. ಅಪ್ರಾಪ್ತೆ ಬಾಲಕಿಯನ್ನು ಕುಲ್‌ದೀಪ್ ಸಿಂಗ್ ಬಳಿ ಕರೆದೊಯ್ದಿದ್ದ ಪ್ರಕರಣದ ಎರಡನೇ ಆರೋಪಿ ಶಶಿ ಸಿಂಗ್ ಅನ್ನು ಕೋರ್ಟ್ ಖುಲಾಸೆಗೊಳಿಸಿದೆ.
2017ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡು ತೀವ್ರ ವಾಗ್ವಾದಗಳಿಗೆ ಕಾರಣವಾಗಿತ್ತು. ಪೊಲೀಸರು, ಅಧಿಕಾರಿಗಳು ತನ್ನ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದ ಸಂತ್ರಸ್ತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಆರೋಪ ಎದುರಿಸುತ್ತಿದ್ದ ಕುಲದೀಪ್ ಸಿಂಗ್ ಮತ್ತು ಅವರ ಬೆಂಬಲಿಗರು ಸಂತ್ರಸ್ತೆಯ ತಂದೆಯ ಮೇಲೆ ತೀವ್ರ ಹಲ್ಲೆ ನಡೆಸಿದ್ದರು. ಈ ಪ್ರಕರಣದ ವಿರುದ್ದ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.