ಗುವಾಹಟಿ, ಡಿ.14: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಅಲ್ಪ ಕಡಿಮೆಯಾಗಿದ್ದು, ಹೀಗಾಗಿ ಇಂದು ಗುವಾಹಟಿಯಲ್ಲಿ ಕರ್ಫ್ಯೂ ಸಡಿಲಿಸಲಾಗಿದೆ.
ಅಸ್ಸಾಂನ ಅತೀ ದೊಡ್ಡ ನಗರವಾದ ಗುವಾಹಟಿಯಲ್ಲಿ ಕಳೆದ ಕೆಲ ದಿನಗಳಿಂದ ನಿಷೇಧಾಜ್ಞೆ ಜಾರಿಯಲ್ಲಿದ್ದು, ಶನಿವಾರ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ನಾಲ್ಕರವರೆಗೆ ಸಡಿಲಿಸಲಾಗಿದೆ. ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ ನಡೆದಿದ್ದವು. ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು ಸೇರಿ ಪ್ರತಿಭಟನೆ ನಡೆಸಿದ್ದವು.
ಗುರುವಾರ ನಡೆದ ಪೊಲೀಸ್ ಫೈರಿಂಗ್ ನಲ್ಲಿ ಇಬ್ಬರು ಮೃತಪಟ್ಟಿದ್ದರು. ಹೀಗಾಗಿ ನಿಷೇಧಾಜ್ಞೆ ಹೇರಲಾಗಿದ್ದು, ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರುವ ಕಾರಣ ಈಗ ಕರ್ಫ್ಯೂ ಸಡಿಲಿಲಾಗಿದೆ. ಗುವಾಹಟಿಯಲ್ಲಿ ಕಳೆದ ರಾತ್ರಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೀಗಾಗಿ ಕರ್ಪ್ಯೂ ಸಡಿಲಿಸಲಾಗಿದೆ. ಆದರೆ ಇಂಟರ್ನೆಟ್ ಸೇವೆಯ ನಿಷೇಧವನ್ನು ಮುಂದುವರಿಸಲಾಗಿದೆ.