ಹೊಸದಿಲ್ಲಿ, ಡಿ.12: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತಿರುವ ಅಸ್ಸಾಂ ಜನರಲ್ಲಿ ಪ್ರತಿಭಟನೆ ಕೈಬಿಡುವಂತೆ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಇದೇ ಸಂದರ್ಭ ಅಸ್ಸಾಂ ಜನರ ಅಧಿಕಾರ, ಹಕ್ಕನ್ನೂ ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಸ್ಸಾಂ ಜನರ ಸಂಸ್ಕೃತಿ, ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದು, ಮತ್ತೊಂದೆಡೆ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮಸೂದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ತೀವ್ರ ಹಿಂಸಾರೂಪಕ್ಕೆ ತಿರುಗಿದೆ. ಇಂದು ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಅಸ್ಸಾಂನ ನನ್ನ ಸಹೋದರ, ಸಹೋದರಿಯರಿಗೆ ನಾನು ಭರವಸೆ ನೀಡುತ್ತಿದ್ದೇನೆ. ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾದ ನಂತರ ಅಸ್ಸಾಂ ಜನರು ಯಾವುದೇ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಅಭಯ ನೀಡಿದ್ದಾರೆ.
ನಿಮ್ಮ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಿರುವ ಮೋದಿ, ನಿಮ್ಮ ಐಕ್ಯತೆ, ಸುಂದರವಾದ ಸಂಸ್ಕೃತಿ ಹಾಗೂ ಹಕ್ಕುಗಳನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಯಾವುದೇ ಭಯ, ಚಿಂತೆ ಬೇಕಾಗಿಲ್ಲ ಎಂದು ಟ್ವೀಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.