ಹೊಸದಿಲ್ಲಿ, ಡಿ.8: ದಿಲ್ಲಿಯ ರಾಣಿ ಜಾನ್ಸಿ ರಸ್ತೆಯಲ್ಲಿರುವ ಅನಜ್ ಮಂಡಿ ಕಾರ್ಖಾನೆಯಲ್ಲಿ ನಡೆದ ಭೀಕರ ಅಗ್ನಿ ದುರಂತದ ಸಾವಿನ ಸಂಖ್ಯೆ 43 ರಕ್ಕೇರಿದೆ. ಅಲ್ಲದೆ ಹಲವು ಮಂದಿ ಗಾಯಗೊಂಡಿದ್ದಾರೆ.
ಸ್ಥಳದಲ್ಲಿ ಈಗಾಗಲೇ 50 ಅಗ್ನಿಶಾಮಕ ದಳ ವಾಹನಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಘಟನೆ ಮುಂಜಾನೆ ನಡೆದಿರುವುದರಿಂದ ಎಲ್ಲ ಕಾರ್ಮಿಕರು ನಿದ್ರೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಕಟ್ಟಡದೊಳಗೆ ಸುಮಾರು 60-70 ಕಾರ್ಮಿಕರಿದ್ದರು.ಘ ಟನೆಯಿಂದ ಮೃತಪಟ್ಟ ಕಾರ್ಮಿಕರಿಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ದಿಲ್ಲಿಯಲ್ಲಿ ಉಂಟಾದ ಅಗ್ನಿ ದುರಂತ ಭಯಾನಕ ಎಂದು ಬಣ್ಣಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಸಂತ್ರಸ್ತರಿಗೆ ಎಲ್ಲ ರೀತಿಯ ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘಟನೆಯನ್ನು ಭೀಕರ ಅಗ್ನಿ ದುರಂತ ಎಂದು ಬಣ್ಣಿಸಿದ್ದಾರೆ.
ಈ ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಗ್ನಿಶಾಮಕ ದಳದ ಉಪ ಮುಖ್ಯಾಧಿಕಾರಿ ಸುನಿಲ್ ಚೌಧರಿ, “ಬೆಂಕಿ 600 ಚದರಡಿ ಸ್ಥಳದಲ್ಲಿ ಹರಡಿದ್ದು, ಕಾರ್ಖಾನೆ ಒಳಗೆ ತೀವ್ರ ಕತ್ತಲು ಕವಿದಿತ್ತು. ಈ ಕಾರ್ಖಾನೆಯು ಶಾಲಾ ಬ್ಯಾಗುಗಳು, ಬಾಟಲ್ ಗಳು ಮತ್ತು ಇತರ ಸಾಮಗ್ರಿಗಳು ಇರುವ ಕಾರ್ಖಾನೆಯಾಗಿದೆ” ಎಂದು ತಿಳಿಸಿದ್ದಾರೆ.
ಹಾಗೆಯೇ “ಇದುವರೆಗೆ 15 ಜನರನ್ನು ರಕ್ಷಿಸಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ಕೆಲವರು ಗಾಯಗೊಂಡಿದ್ದು, ಕೆಲವರು ತೀವ್ರ ಹೊಗೆಯಿಂದಾಗಿ ಉಸಿರುಗಟ್ಟಿ ತಲೆಸುತ್ತಿ ಬಿದ್ದಿದ್ದಾರೆ. ಈ ಘಟನೆ ನಡೆಯುವ ಸಂದರ್ಭದಲ್ಲಿ 20ರಿಂದ 25 ಕಾರ್ಮಿಕರು ಕಾರ್ಖಾನೆಯೊಳಗೆ ನಿದ್ದೆ ಮಾಡುತ್ತಿದ್ದರು ಎಂದು ಕಾರ್ಖಾನೆ ಮಾಲೀಕ ತಿಳಿಸಿದ್ದಾರೆ. ಮಧ್ಯಮ ಪ್ರಮಾಣದಲ್ಲಿ ಬೆಂಕಿ ಹತ್ತಿ ಉರಿದಿದ್ದು ಇದೀಗ ಬೆಂಕಿಯನ್ನು ಸಂಪೂರ್ಣವಾಗಿ ಆರಿಸಲಾಗಿದೆ ” ಎಂದು ಚೌಧರಿ ಹೇಳಿದರು. ರಕ್ಷಣಾ ಕಾರ್ಯ ಮುಂದುವರಿದಿದೆ.