(ನ್ಯೂಸ್ ಕಡಬ) newskadaba.com ಕಡಬ, ನ.09. ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ಬಾಬರಿ ಮಸೀದಿಯ ಪರವಾಗಿ ವಾದ ನಡೆಸಲು ದೇಶದ ಹಿರಿಯ ವಕೀಲರಾದ ಡಾ. ರಾಜೀವ್ ಧವನ್, ಮೀನಾಕ್ಷಿ ಅರೋರಾ, ಹಾಗೂ ದಫರುಲ್ಲಾ ಜೀಲಾನಿಯವರನ್ನು ನೇಮಿಸಲಾಗಿದ್ದು, ಈ ತಂಡದಲ್ಲಿ ಉಪ್ಪಿನಂಗಡಿ ಹಾಗೂ ಸುಳ್ಯದ ಯುವ ವಕೀಲರಿಬ್ಬರು ಇದ್ದರೆಂದು ತಿಳಿದುಬಂದಿದೆ.
ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ನಿವಾಸಿ ದಿ| ಯೂಸುಫ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ ಹಾಗೂ ಸುಳ್ಯ ಸಮೀಪದ ಗಾಂಧಿನಗರ ಕಲ್ಲುಮುಟ್ಲು ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಶರೀಫ್ ಬಾಬರಿ ಮಸೀದಿಯ ಪರ ವಾದಿಸುವ ತಂಡದಲ್ಲಿದ್ದ ವಕೀಲರು. ಪುತ್ತೂರಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುವ ಮೂಲಕ ತನ್ನ ವೃತ್ತಿಯನ್ನು ಆರಂಭಿಸಿದ್ದ ಅಬ್ದುಲ್ ರಹಿಮಾನ್ ಬಳಿಕ ಸುಪ್ರಿಂಕೋರ್ಟಿನಲ್ಲಿ ವಕೀಲರಾಗಿ ಸೇವೆ ಆರಂಭಿಸಿದ್ದರು.
ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸುಳ್ಯದ ಗಾಂಧಿನಗರದಲ್ಲಿ ಪೂರೈಸಿ, ಸುಳ್ಯ ಸರಕಾರಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದ ಶರೀಫ್, ಸುಳ್ಯದ ಎನ್.ಎಂ.ಸಿ. ಯಲ್ಲಿ ಪದವಿ ಹಾಗೂ ಕೆವಿಜಿಯಲ್ಲಿ ಎಲ್.ಎಲ್.ಬಿ ಮುಗಿಸಿಕೊಂಡು 2018 ಫೆಬ್ರವರಿಯಿಂದ ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ವಾದ ಮಂಡಿಸುತ್ತಿದ್ದಾರೆ.