(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.20. ಲಘು ಮೋಟಾರು ವಾಹನ (ಎಲ್ಎಂವಿ) ಲೈಸೆನ್ಸ್ ಹೊಂದಿರುವ ಚಾಲಕರು ಹಳದಿ ಬಣ್ಣದ ನೋಂದಣಿ ಹೊಂದಿರುವ ಟೂರಿಸ್ಟ್ ವಾಹನಗಳನ್ನು ಬ್ಯಾಡ್ಜ್ ಇಲ್ಲದೆಯೇ ಚಲಾಯಿಸಬಹುದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನ ಆದೇಶವನ್ನು ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.
ಪ್ರಸ್ತುತ ಹಳದಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ಲಘು ಮೋಟಾರು ವಾಹನಗಳಾದ ಆಟೋರಿಕ್ಷಾ, ಜೀಪು, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಟೆಂಪೊಗಳನ್ನು ಹಾಗೂ ಘನಾ ವಾಹನಗಳನ್ನು ಚಲಾಯಿಸಲು ಬ್ಯಾಡ್ಜ್ ಹೊಂದಿರಬೇಕಾಗುತ್ತದೆ. ಬ್ಯಾಡ್ಜ್ ಮಾಡಿಸಲು ಎಂಟನೇ ತರಗತಿ ಉತ್ತೀರ್ಣರಾಗಿರಬೇಕು ಎನ್ನುವ ಈ ಹಿಂದಿನ ನಿಯಮವನ್ನು ಸಡಿಲಿಸಿ ಬ್ಯಾಡ್ಜ್ ಇಲ್ಲದೆಯೂ ವಾಹನಗಳನ್ನು ಚಲಾಯಿಸಬಹುದು ಎನ್ನುವ ನೂತನ ಆದೇಶ ಜಾರಿಗೆ ಬಂದಲ್ಲಿ ಬ್ಯಾಡ್ಜ್ ಮಾಡಿಸಲು ಸಾಧ್ಯವಾಗದೆ ಪರಿತಪಿಸುತ್ತಿರುವ ಅದೆಷ್ಟೋ ಚಾಲಕರು ಸಮಾಧಾನದ ನಿಟ್ಟುಸಿರು ಬಿಡಬಹುದು.