(ನ್ಯೂಸ್ ಕಡಬ) newskadaba.com ಮಂಗಳೂರು, ನ.09. ಕಳೆದ ಹಲವಾರು ವರ್ಷಗಳಿಂದ ಹಿಂದೂ – ಮುಸ್ಲಿಂ ಸಾಮರಸ್ಯಕ್ಕೆ ಧಕ್ಕೆಯಾಗಿದ್ದ ವಿವಾದಿತ ಅಯೋಧ್ಯಾ ಭೂಒಡೆತನದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠವು ಶನಿವಾರದಂದು ಪ್ರಕಟಿಸಿದೆ. ಪೀಠದಲ್ಲಿದ್ದ ಐವರು ನ್ಯಾಯಾಧೀಶರ ಪೈಕಿ ಓರ್ವರು ದಕ್ಷಿಣ ಕನ್ನಡ ಜಿಲ್ಲೆಯವರೆಂದು ನಿಮಗೆ ತಿಳಿದಿದೆಯೇ..?
ಹೌದು… ನ್ಯಾ. ಅಬ್ದುಲ್ ನಝೀರ್ ಅವರು ಕರ್ನಾಟಕ ರಾಜ್ಯದ ಕರಾವಳಿಯವರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಬೆಳುವಾಯಿ ನಿವಾಸಿ ಫಕೀರ್ ಸಾಬ್ ಎಂಬವರ ಪುತ್ರರಾಗಿರುವ ನಝೀರ್ ಅವರು ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದು ಬಳಿಕ ಮಂಗಳೂರಿನ ಎಸ್.ಡಿ.ಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದವರು. 1983ರಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ ವಕೀಲಿ ವೃತ್ತಿ ಜೀವನ ಪ್ರಾರಂಭಿಸಿದ ನಝೀರ್ ಅವರು 2003ರಲ್ಲಿ ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡು 2004ರಲ್ಲಿ ಪೂರ್ಣ ಪ್ರಮಾಣದ ನ್ಯಾಯಾಧೀಶರಾದರು. 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡು ಇದೀಗ ಐತಿಹಾಸಿಕ ತೀರ್ಪು ನೀಡಿದ ಪಂಚ ಸದಸ್ಯರ ಪೀಠದಲ್ಲಿ ಓರ್ವರಾಗಿದ್ದಾರೆ.