(ನ್ಯೂಸ್ ಕಡಬ) newskadaba.com ಪುತ್ತೂರು, ಅ.09. ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿರೋಡ್ ನಿಂದ ಅಡ್ಡಹೊಳೆಯವರೆಗೆ ಕೈಗೆತ್ತಿಕೊಂಡಿರುವ ಚತುಷ್ಪಥ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಅಲ್ಲಲ್ಲಿ ಬೃಹತ್ ಹೊಂಡಗಳು ನಿರ್ಮಾಣಗೊಂಡಿದ್ದು, ಅದನ್ನು ದುರಸ್ಥಿಗೊಳಿಸದೆ ಇರುವುದರಿಂದ ಸಾರ್ವಜನಿಕರು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ನಾಳೆ (ಆ.10) ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿ 75ರ ಹೋರಾಟ ಸಮಿತಿಯ ಅಧ್ಯಕ್ಷ ಫಾ| ವರ್ಗೀಸ್ ಅವರು ಹೇಳಿದ್ದಾರೆ.
ಮಂಗಳವಾರದಂದು ಪತ್ರಿಕಾಗೋಷ್ಠಿಯಲ್ಲಿ ನಾತನಾಡಿದ ಅವರು ಈಗಾಗಲೇ ಕೇಂದ್ರ ಸರಕಾರದಿಂದ ಚತುಷ್ಪತ ರಸ್ತೆಯಾಗಿ ಮಂಜೂರುಗೊಂಡಿರುವ ಈ ರಸ್ತೆಯಲ್ಲಿ ಬಹುತೇಕ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಎಲ್ & ಟಿ ಕಂಪೆನಿಯು ರಸ್ತೆ ನಿರ್ಮಾಣದ ಗುತ್ತಿಗೆ ಪಡೆದಿದ್ದು, ಕಳೆದ ಮೂರು ವರ್ಷಗಳಿಂದ ರಸ್ತೆ ಬದಿಯಲ್ಲಿ ಯಾವುದೇ ತಾಂತ್ರಿಕ ರೂಪು ರೇಷೆಗಳಿಲ್ಲದೆ ರಸ್ತೆಯನ್ನು ಅಲ್ಲಲ್ಲಿ ಅಗೆದು ಹಾಕಿ ಕಾಮಗಾರಿಯನ್ನು ಅರ್ಧದಲ್ಲಿ ನಿಲ್ಲಿಸಿರುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ತುರ್ತು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಅನೇಕ ಮಂದಿ ವಾಹನ ಸವಾರರು ಬಿದ್ದು ತೀವ್ರ ಸ್ವರೂಪದ ಗಾಯಗಳಾಗಿವೆ. ಈ ಕುರಿತು ಎಲ್ & ಟಿ ಕಂಪೆನಿಯವರಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ನಮ್ಮ ಮನವಿಗೆ ಸ್ಪಂದಿಸದೆ ಬೇಜವಾಬ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ದುಸ್ಥಿತಿಗೆ ತಲುಪಿಸಿದ್ದಾರೆ. ಹಾಗಾಗಿ ನಾವು ಪ್ರತಿಭಟನೆ ಮಾರ್ಗ ಹಿಡಿದ್ದೇವೆ. ಇದು ರಾಜಕೀಯ ರಹಿತ ಪ್ರತಿಭಟನೆಯಾಗಿದ್ದು, ಸುಮಾರು 01 ಗಂಟೆಗಳ ಕಾಲ ರಸ್ತೆ ತಡೆ ಮಾಡಲಿದ್ದೇವೆ ಎಂದರು.
ನೆಲ್ಯಾಡಿ ಭಾಗದ ಸುಮಾರು 23 ಸಂಘ ಸಂಸ್ಥೆಗಳು ಬೀದಿಗಿಳಿದು ಹೋರಾಟ ನಡೆಸಲು ತೀರ್ಮಾನಿಸಲಾಗಿದ್ದು, ಸುಮಾರು ಮೂರರಿಂದ ಐದು ಸಾವಿರ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಸೇರಿ ಅಲ್ಲಿಂದ ಮೆರವಣಿಗೆಯ ಮೂಲಕ ನೆಲ್ಯಾಡಿ ಆಟೋ ನಿಲ್ದಾಣದಲ್ಲಿ ಸೇರಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಕಾರ್ಯದರ್ಶಿ ಜೋನ್ ಕೆ.ಜೆ, ನೆಲ್ಯಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಜಯಾನಂದ, ವರ್ತಕ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಚ್.ಇ, ಹೋರಾಟ ಸಮಿತಿಯ ಫಾ| ಆದರ್ಶ್ ಜೋಸೆಫ್, ದ.ಕ. ನೀತಿ ಸಂಘಟನೆಯ ಕಾರ್ಯದರ್ಶಿ ಪ್ರಮೋದ್ ಅವರು ಉಪಸ್ಥಿತರಿದ್ದರು.