(ನ್ಯೂಸ್ ಕಡಬ) newskadaba.com ನವದೆಹಲಿ ಆ.13. ಟೆಲಿಕಾಂ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಕಾಲಿಟ್ಟ ನಂತರ ಎಲ್ಲಾ ಕಂಪೆನಿಗಳು ದರ ಸಮರದಲ್ಲಿ ಪೈಪೋಟಿಯನ್ನು ನಡೆಸುತ್ತಿರುವುದರ ಮಧ್ಯೆಯೇ ಶೀಘ್ರದಲ್ಲಿ ಟೆಲಿಕಾಂ ಕಂಪೆನಿಗಳು ಕರೆ ದರವನ್ನು ಇನ್ನಷ್ಟು ಕಡಿತಗೊಳಿಸುವ ಸಾಧ್ಯತೆಯಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇಂಟರ್‍ಕನೆಕ್ಟ್ ಯೂಸೇಜ್ ಚಾರ್ಜ್ (ಐಯುಸಿ) ಬೆಲೆಯನ್ನು ಕಡಿತಗೊಳಿಸಲು ಮುಂದಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಪ್ರಸ್ತುತ ಪ್ರತಿ ನಿಮಿಷಕ್ಕೆ 14 ಪೈಸೆ ಐಯುಸಿ ಇದ್ದು ಇದನ್ನು 10 ಪೈಸೆಗೆ ಇಳಿಸಲು ಟ್ರಾಯ್ ಮುಂದಾಗಿದೆ ಎಂದು ವರದಿಯಾಗಿದೆ. ಐಯುಸಿ ನಿಗದಿ ಪಡಿಸಿದ್ದಕ್ಕೆ ಜಿಯೋ ವಿರೋಧ ವ್ಯಕ್ತಪಡಿಸಿದ್ದು, ನಾವು ಕರೆಗೆಂದೇ ಪ್ರತ್ಯೇಕವಾಗಿ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ ಐಯುಸಿಯಿಂದ ನಮಗೆ ಹೊರೆಯಾಗುತ್ತಿದ್ದು, ಇತರೇ ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮಾಡಿಕೊಂಡ ತಂತ್ರ ಎಂದು ಜಿಯೋ ವಾದಿಸಿದೆ. 2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಟ್ರಾಯ್ ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ ಐಯುಸಿ ಬೆಲೆಯನ್ನು ಟ್ರಾಯ್ ನಿಗದಿಪಡಿಸಿತ್ತು. ಇಂಟರ್‍ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಟ್ರಾಯ್ ನಿಗದಿ ಪಡಿಸುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ಏರ್‍ಟೆಲ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ಏರ್‍ಟೆಲ್ ಗೆ ಪಾವತಿಸಬೇಕಾಗುತ್ತದೆ.