(ನ್ಯೂಸ್ ಕಡಬ) newskadaba.com ಗುಜರಾತ್, ಆ.09. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಗುಜರಾತ್ ವಿಧಾನಸಭೆಯ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಹ್ಮದ್ ಪಟೇಲ್ ಅನಿರೀಕ್ಷಿತ ಗೆಲುವು ಸಾಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾಗೆ ತೀವ್ರ ಮುಖಭಂಗವಾಗಿದೆ. ತಮ್ಮ ತವರು ರಾಜ್ಯ ಗುಜರಾತ್‍ನಲ್ಲಿ ಮೂರೂ ಸ್ಥಾನಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಬೇಕೆಂಬ ಬಿಜೆಪಿಯ ತುಡಿತಕ್ಕೆ ಕರ್ನಾಟಕದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೂಡಿದಂತಹ ಪ್ರತಿತಂತ್ರ ಫಲ ನೀಡಿದೆ.
ಆಪರೇಶನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡಿದ್ದ ಬಿಜೆಪಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್ಸಿನ ಇನ್ನಿಬ್ಬರು ಶಾಸಕರನ್ನು ಅಡ್ಡಮತದಾನದ ಮೂಲಕ ಬೆಜೆಪಿಗೆ ಮತ ಹಾಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಡ್ಡಮತದಾನವನ್ನು ಅಸಿಂಧುಗೊಳಿಸುವಂತೆ ಪಟ್ಟುಹಿಡಿದ ಕಾಂಗ್ರೆಸ್ ನಿಯೋಗ ಕೇಂದ್ರ ಚುನಾವಣಾ ಆಯೋಗದ ಕಛೇರಿಗೆ ತೆರಳಿ ಮನವಿ ಸಲ್ಲಿಸಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿಯೂ ಕೂಡ ನಿಯೋಗವನ್ನು ಕಳುಹಿಸಿಕೊಟ್ಟಿತ್ತು. ಆದರೆ ಕಾಂಗ್ರೆಸ್ಸಿನ ಹಠಕ್ಕೆ ಮಣಿದ ಕೇಂದ್ರ ಚುನಾವಣಾ ಆಯೋಗ ಕಾಂಗ್ರೆಸ್ ಶಾಸಕರ ಮತಗಳನ್ನು ಅಸಿಂಧುಗೊಳಿಸಿ ತೀರ್ಪನ್ನು ನೀಡಿತು. ಬಿಜೆಪಿಯ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಗೆಲುವು ಸಾಧಿಸಿ ರಾಜ್ಯಸಭೆಗೆ ಆಯ್ಕೆಯಾದರಾದರೂ ಸೋನಿಯಾ ಆಪ್ತ ಅಹ್ಮದ್ ಪಟೇಲ್‍ರನ್ನು ಸೋಲಿಸಬೇಕೆಂಬ ಪ್ರಮುಖ ಗುರಿ ಈಡೇರದ ಹಿನ್ನೆಲೆಯಲ್ಲಿ ಬಿಜೆಪಿಗೆ ನಿರಾಶೆಯಾಗಿದ್ದು, ಅಮಿತ್ ಶಾ ರಾಜ್ಯ ಸಭೆಗೆ ಗೆದ್ದರೂ, ತಂತ್ರಗಾರಿಕೆಯಲ್ಲಿ ಸೋತಂತಾಗಿದ್ದಾರೆ.