(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.11. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರಾವಳಿಯಾದ್ಯಂತ ಮೋಡ ಕವಿದ ವಾತಾವರಣ ನೆಲೆಸಿದ್ದು, ಜಿಲ್ಲೆಯ ವಿವಿಧೆಡೆ ತುಂತುರು ಮಳೆಯಾಗುತ್ತಿದೆ.
ವಾಯುಭಾರ ಕುಸಿತದಿಂದ ಅರಬ್ಬೀ ಸಮುದ್ರವು ಪ್ರಕ್ಷುಬ್ಧಗೊಂಡಿದ್ದು, ಕರಾವಳಿಯ ತೀರ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಾಯುಭಾರ ಕುಸಿತವು ಮಂಗಳವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದ್ದು, ಮುಂದಿನ ಎರಡು ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯದ ಹಲವೆಡೆ ಹಾಗೂ ಲಕ್ಷದ್ವೀಪ, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಕರಾವಳಿಯಲ್ಲಿ ಸಮುದ್ರ ಕಿನಾರೆಯಿಂದ ಈಗಾಗಲೇ ಗಾಳಿಯ ತೀವ್ರತೆ ಹೆಚ್ಚಾಗಿದ್ದು, ಇದು ಮುಂದಿನ ಎರಡು ದಿನಗಳ ಕಾಲ ಮುಂದುವರಿಯಲಿದೆ. ಮಂಗಳೂರಿನ ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು, ಸೋಮೇಶ್ವರ, ಉಳ್ಳಾಲ ಬೀಚ್‌ಗಳಿಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.