(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.23. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮೂರನೇ ಬಾರಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮೊದಲ ಸುತ್ತಿನಲ್ಲೇ ಭಾರೀ ಮುನ್ನಡೆ ಕಾಯ್ದುಕೊಂಡು ಬಂದಿದ್ದ ನಳಿನ್ ಬಳಿಕ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದ್ದರೆ, ತನ್ನ ಎದುರಾಳಿ ಪ್ರತಿಸ್ಪರ್ಧಿ ಮಿಥುನ್ ರೈ ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆ ತೀವ್ರ ಮುಖಭಂಗ ಉಂಟಾಗಿದೆ. 28 ವರ್ಷಗಳ ಬಿಜೆಪಿಯ ಭದ್ರಕೋಟೆಯನ್ನು ವಶಪಡಿಸಲು ಕಾಂಗ್ರೆಸ್ ಹಲವು ರೀತಿಯಲ್ಲಿ ಕಸರತ್ತು ನಡೆಸಿತ್ತಾದರೂ, ಮೋದಿ ಅಲೆಯ ಎದುರು ಕಾಂಗ್ರೆಸ್ ನ ಯಾವುದೇ ತಂತ್ರಗಾರಿಕೆ ಕೆಲಸ ಮಾಡಿಲ್ಲ.
ಕಳೆದ ಬಾರಿ 1,43,709 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ನಳಿನ್ ಈ ಬಾರಿ ತನ್ನ ಹಿಂದಿನ ದಾಖಲೆಯನ್ನೇ ಮುರಿದು 2 ಲಕ್ಷ 73 ಸಾವಿರ ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಗೆಲುವಿನಿಂದ ಪಕ್ಷದ ಕಾರ್ಯಕರ್ತರಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಅಲ್ಲಲ್ಲಿ ಸಿಹಿತಿಂಡಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.