(ನ್ಯೂಸ್ ಕಡಬ) newskadaba.com ಕಡಬ, ಮಾ.31. ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು, ಒರುಂಬಾಲು, ಲಾವತ್ತಡ್ಕ ಸಂಪರ್ಕ ರಸ್ತೆ ಅಭಿವೃದ್ದಿಯಾಗಬೇಕೆಂಬ ಬಹುಕಾಲದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಈ ಭಾಗದ ಜನತೆ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ದರಿಸಿದ್ದಾರೆ.
ಗ್ರಾಮದ ಎರಡನೇ ವಾರ್ಡ್ ವ್ಯಾಪ್ತಿಯಲ್ಲಿರುವ ಈ ರಸ್ತೆಯನ್ನು ಡಾಮರಿಕರಣಗೊಳಿಸಬೇಕೆಂದು ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಗ್ರಾಮ ಸಭೆಗಳಲ್ಲಿ ಮನವಿ ಮಾಡುತ್ತ ಬರಲಾಗುತ್ತಿದೆ. ಆದರೆ ಭರವಸೆ ಮಾತ್ರ ದೊರೆತರೂ ಅಭಿವೃದ್ದಿ ಮರೀಚಿಕೆಯಾಗಿದೆ. ಹಾಗಾಗಿ ಈ ಬಾರಿ ಮತದಾನ ಬಹಿಷ್ಕರಿಸುವ ದಿಟ್ಟ ನಿರ್ಧಾರಕ್ಕೆ ಬರಲಾಗಿದೆ ಎನ್ನುತ್ತಾರೆ ಈ ಭಾಗದ ಜನತೆ. ಸುಮಾರು ಆರು ಕಿಮೀ ನಷ್ಟು ಉದ್ದದ ಈ ರಸ್ತೆಯನ್ನು ಸುಮಾರು 100ಕ್ಕೂ ಹೆಚ್ಚು ಕಟುಂಬಗಳು ಆಶ್ರಯಿಸಿದೆ. ಮಳೆಗಾಲದಲ್ಲಿ ಕೆಸರುಮಯ, ಬೇಸಿಗೆಯಲ್ಲಿ ದೂಳಿನಿಂದ ಆವೃತವಾಗಿ ವಾಹನ ಸಂಚಾರಕ್ಕೆ, ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯನ್ನು ದುರಸ್ಥಿಗೊಳಿಸುವವರೆಗೆ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದರು…!
ಈ ರಸ್ತೆಯನ್ನು ಡಾಮರೀಕರಣಗೊಳಿಸುವಂತೆ ಒತ್ತಾಯಿಸಿ 2018ರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದರು. ವಿವಿಧ ಪಕ್ಷಗಳ ಮುಖಂಡರು ಆಗಮಿಸಿ ದುರಸ್ತಿ ಮಾಡುವ ಭರವಸೆ ನೀಡಿದ್ದರು. ಈವರೆಗೂ ಈಡೇರಿಲ್ಲದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಈ ಭಾರಿ ಮತ್ತೊಮ್ಮೆ ಚುನಾವಣೆ ಬಹಿಷ್ಕಾರ ಮಾಡಲಿದ್ದಾರೆ.
ಚುನಾವಣೆ ಬಹಿಷ್ಕಾರ ಸ್ಪಷ್ಟ – ಶ್ರೀಧರ ಕಂಪ
ರಸ್ತೆಯನ್ನು ದುರಸ್ತಿಪಡಿಸಿ ಎಂದು ಕಳೆದ ಹಲವು ವರ್ಷಗಳಿಂದ ಸಂಬಂದಪಟ್ಟವರಿಗೆ ಹಲವು ಬಾರಿ ಆಗ್ರಹಿಸಲಾಗಿದೆ. ಕಳೆದ ವಿಧಾನ ಸಭೆ ಚುನಾವಣೆಯನ್ನು ಬಹಿಷ್ಕರಿಸಿರುತ್ತೇವೆ. ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಸ್ಪಷ್ಟವಾಗಿ ಗ್ರಾಮಸ್ಥರೆಲ್ಲ ನಿರ್ಧರಿಸಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ಮಾಚ್.31ರಂದು ನಡೆಸಲು ನಿರ್ದರಿಸಲಾಗಿದೆ.