(ನ್ಯೂಸ್ ಕಡಬ) newskadaba.com ನವದೆಹಲಿ, ಮಾ.30. ಕರಾವಳಿಯ ಬ್ಯಾಂಕ್ ಗಳಲ್ಲಿ ಒಂದಾದ ವಿಜಯ ಬ್ಯಾಂಕ್ ಇನ್ಮುಂದೆ ನೆನಪು ಮಾತ್ರ. ಎಪ್ರಿಲ್ ಒಂದರಿಂದ ಬ್ಯಾಂಕ್ ಆಫ್ ಬರೋಡಾದ ಜೊತೆ ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕುಗಳು ವಿಲೀನಗೊಳ್ಳಲಿದ್ದು, ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಲಿದೆ.
ಪ್ರಸ್ತುತ 45.85 ಲಕ್ಷ ಕೋಟಿ ಮೌಲ್ಯದ ವ್ಯವಹಾರಗಳೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೊದಲ ಸ್ಥಾನದಲ್ಲಿದ್ದು, 15.8 ಲಕ್ಷ ಕೋಟಿ ವ್ಯವಹಾರಗಳೊಂದಿಗೆ ಎಚ್‍ಡಿಎಫ್‍ಸಿ ಎರಡನೇ ಸ್ಥಾನದಲ್ಲಿದ್ದರೆ, ದೇನಾ ಮತ್ತು ವಿಜಯಾ ಬ್ಯಾಂಕ್‍ಗಳ ವಿಲೀನದಿಂದಾಗಿ ಬ್ಯಾಂಕ್ ಆಫ್ ಬರೋಡಾದ ವ್ಯವಹಾರದ ಮೌಲ್ಯ 15.4 ಲಕ್ಷ ಕೋಟಿ ಆಗಲಿದೆ. ಇದರೊಂದಿಗೆ 11.02 ಲಕ್ಷ ಕೋಟಿ ವ್ಯವಹಾರಗಳೊಂದಿಗೆ ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ಐಸಿಐಸಿಐ ಬ್ಯಾಂಕ್ ನ್ನು ಹಿಂದಕ್ಕೆ ತಳ್ಳಿ ಬ್ಯಾಂಕ್ ಆಫ್ ಬರೋಡಾ ಮೂರನೇ ಸ್ಥಾನವನ್ನು ಅಲಂಕರಿಸಲಿದೆ.
ಬ್ಯಾಂಕ್ ವಿಲೀನದಿಂದಾಗಿ ಮುಂದಿನ ದಿನಗಳಲ್ಲಿ ದೇನಾ ಬ್ಯಾಂಕ್, ವಿಜಯ ಬ್ಯಾಂಕ್ ಗ್ರಾಹಕರಿಗೆ ಹೊಸ ಖಾತೆಯ ಸಂಖ್ಯೆ ಮತ್ತು ಕಸ್ಟಮರ್ ಐಡಿ ಸಿಗಲಿದೆ. ಬ್ಯಾಂಕ್‍ಗಳ ವಿಲೀನದಿಂದಗ ಕೆಲ ಶಾಖೆಗಳು ಬಂದ್ ಆಗಲಿವೆ. ಹಾಗಾಗಿ ಗ್ರಾಹಕರು ಸಮೀಪದ ಬ್ಯಾಂಕ್ ಬರೋಡಾ ಬ್ಯಾಂಕ್ ಸಂಪರ್ಕಿಸಬೇಕಾಗುತ್ತದೆ. ಸಾಲಗಾರರು ಅಥವಾ ಇಎಂಐ ಗ್ರಾಹಕರು ಹೊಸ ಅರ್ಜಿಯನ್ನು ಭರ್ತಿ ಮಾಡಿ, ಸಂಬಂಧಪಟ್ಟ ದಾಖಲೆಗಳನ್ನು ಬ್ಯಾಂಕಿಗೆ ಸಲ್ಲಿಸಬೇಕು. ಬ್ಯಾಂಕ್ ಆಫ್ ಬರೋಡಾಗೆ ಸೇರ್ಪಡೆಯಾಗುವ ಎಲ್ಲ ಗ್ರಾಹಕರಿಗೆ ಹೊಸ ಡೆಬಿಟ್ ಕಾರ್ಡ್, ಚೆಕ್‍ಬುಕ್ ಮತ್ತು ಕ್ರೆಡಿಟ್ ಕಾರ್ಟ್ ನೀಡಲಾಗುತ್ತದೆ. ವಾಹನಗಳ ಮೇಲಿನ ಸಾಲ, ಗೃಹ ಸಾಲ, ವೈಯಕ್ತಿಕ ಸಾಲ ಪಡೆದ ಗ್ರಾಹಕರು ಪಾವತಿಸುತ್ತಿರುವ ಬಡ್ಡಿ ಮೊತ್ತದಲ್ಲಿ ಯಾವುದೇ ಬದಲಾವಣೆಗಳಿಲ್ಲ.