(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು.29. ಕಳೆದ ಕೆಲವು ದಿನಗಳ ಹಿಂದೆ ಪುತ್ತೂರು ತಾಲೂಕಿನ ಇಚಿಲಂಪಾಡಿ ಸೈಂಟ್ ಜಾರ್ಜ್ ಸಿರಿಯನ್ ಜಾಕೋಬೈಟ್ ಚರ್ಚಿನ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಬೆಳ್ತಂಗಡಿ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ ಘಟನೆ ಶುಕ್ರವಾರದಂದು ನಡೆದಿದೆ.
ಆರೋಪಿಗಳನ್ನು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಬಾನಸಂದ್ರ ಪಾಳ್ಯ ನಿವಾಸಿ ಉಮೇಶ್ ಬಿ.ಎನ್(30) ಮತ್ತು ಬೆಂಗಳೂರಿನ ಕುಂಬಳಗೋಡು ಗೇರುಪಾಳ್ಯ ನಿವಾಸಿ ವೆಂಕಟೇಶ್(38) ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಬೆಂಗಳೂರು ನಿವಾಸಿ ನವೀನ್ ಪರಾರಿಯಾಗಿದ್ದಾನೆ. ಕಳ್ಳರಿಂದ ಬುಲೆಟ್, ಕೆಟಿಎಂ ಡ್ಯೂಕ್, ಪಲ್ಸರ್ ಸೇರಿದಂತೆ 5 ಬೈಕುಗಳು, ಸುಮಾರು 60 ಗ್ರಾಂ ಚಿನ್ನಾಭರಣ, ಬೆಳ್ಳಿಯ ಆಭರಣ, ತಟ್ಟೆಗಳು, ಇನ್ವರ್ಟರ್ ಬ್ಯಾಟರಿ, ಹಣ ಎಣಿಸುವ ಯಂತ್ರ, ಮೊಬೈಲ್ ಗಳು ಸೇರಿದಂತೆ ಅಪಾರ ಪ್ರಮಾಣದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ರಾಜ್ಯದ ವಿವಿಧ ಜಿಲ್ಲೆಗಳ ಹಲವು ದೇವಸ್ಥಾನ, ಚರ್ಚುಗಳು, ಸೊಸೈಟಿ, ಶಾಲೆಗಳಿಂದ ಕಳ್ಳತನ ನಡೆಸುತ್ತಿದ್ದರು. ಆರೋಪಿಗಳು ಕಳ್ಳತನ, ದರೋಡೆ ಸೇರಿದಂತೆ 30ಕ್ಕಿಂತಲೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಇಚಿಲಂಪಾಡಿ ಚರ್ಚಿನಲ್ಲಿ ಕಳ್ಳತನ ನಡೆಸಿದಾಗ ಇವರ ಚಹರೆ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿತ್ತು. ಸಿ.ಸಿ. ಕ್ಯಾಮೆರಾ ಚಿತ್ರವನ್ನು ಇಚಿಲಂಪಾಡಿಯ ನೀತಿ ತಂಡದವರು ವಾಟ್ಸಾಪ್‍ಗಳಲ್ಲಿ ಹರಿಯಬಿಟ್ಟಾಗ ಆರೋಪಿಗಳು ಬೆಳ್ತಂಗಡಿ ವ್ಯಾಪ್ತಿಯಲ್ಲಿ ಅವಿತಿದ್ದಾರೆಂದು ಮಾಹಿತಿ ಬಂದ ಮೇರೆಗೆ ನೀತಿ ತಂಡದ ಪ್ರಮುಖರು ಕಡಬ ಠಾಣೆಗೆ ದೂರು ನೀಡಿದ್ದರು. ಕಡಬ ಪೊಲೀಸರು ಬೆಳ್ತಂಗಡಿ ಪೊಲೀಸರೊಂದಿಗೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.