(ನ್ಯೂಸ್ ಕಡಬ) newskadaba.com.ನವದೆಹಲಿ,ಜ.11. ವಾಹನಗಳನ್ನು ಮನಬಂದಂತೆ ಬದಲಾವಣೆ ಮಾಡುವ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ವಾಹನ ತಯಾರಿಕಾ ಸಂಸ್ಥೆ ನೋಂದಣಿಯಲ್ಲಿ ನಮೂದಿಸಿದ ಮೂಲ ಸೌಲಭ್ಯಗಳಲ್ಲಿನ ಯಾವುದೇ ಅಂಶವೂ ಬದಲಾವಣೆ ಆಗಬಾರದು ಎಂದು ಆದೇಶಿಸಿದೆ.ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ವಿನೀತ್ ಶರಣ್ ಅವರನ್ನೊಳಗೊಂಡ ದ್ವಿಸದಸ್ಯಪೀಠ ಪ್ರಕರಣದ ವಿಚಾರಣೆ ನಡೆಸಿದ್ದು, ಕೇರಳ ಹೈಕೋರ್ಟ್ ನೀಡಿದ ತೀರ್ಪನ್ನು ರದ್ದುಪಡಿಸಿ ಮೋಟಾರು ವಾಹನ ಕಾಯ್ದೆ ಸೆಕ್ಷನ್ 52(1) ಅಡಿ ವಾಹನ ತಯಾರಿಕಾ ಸಂಸ್ಥೆ ನೋಂದಣಿಯಲ್ಲಿ ನಮೂದಿಸಿದ ಮೂಲ ಸೌಲಭ್ಯಗಳು ಕಡ್ಡಾಯ ಎಂದು ತಿಳಿದಿದೆ.
ಅಲ್ಲದೇ ವಾಹನ ಉತ್ಪಾದನೆಯ ಮೂಲ ಮಾದರಿಯು ರಸ್ತೆಯ ಯೋಗ್ಯತೆ ಮತ್ತು ಸುರಕ್ಷತೆ ವೈಶಿಷ್ಟ್ಯಗಳಿಗೆ ಮಾತ್ರ ಪರೀಕ್ಷಿಸಲ್ಪಡುತ್ತದೆ ಎಂಬ ಆಧಾರದ ಅನ್ವಯ ತೀರ್ಪು ನೀಡಿದೆ. ಆದ್ದರಿಂದ ತಯಾರಕರ ಮೂಲ ನಿರ್ದಿಷ್ಟ ವಿನ್ಯಾಸಕ್ಕೆ ಧಕ್ಕೆಯಾದರೆ ಯಾವುದೇ ವಾಹನ ನೋಂದಣಿಯಾಗಲು ಅನುಮತಿ ನೀಡಲಾಗುವುದಿಲ್ಲ ಎಂದು ತನ್ನ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.