(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.20. ವಿವಿಧ ಬೇಡಿಕೆಗಳ ಈಡೇರಿಕೆ ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಓಸಿ) ಡಿ.21ರಂದು ಶುಕ್ರವಾರ ದೇಶಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದು, ಮುಂದಿನ 5 ದಿನಗಳ ಕಾಲ ಬ್ಯಾಂಕುಗಳಿಗೆ ಸಾಲು ಸಾಲು ರಜೆ ಇರಲಿವೆ.
ಡಿಸೆಂಬರ್ 22 ತಿಂಗಳ ನಾಲ್ಕನೇ ಶನಿವಾರವಾದ ಕಾರಣ ರಜೆಯಾಗಿದ್ದು, 23 ಭಾನುವಾರದ ರಜೆ, ಡಿಸೆಂಬರ್ 25 ಮಂಗಳವಾರದಂದು ಕ್ರಿಸ್ಮಸ್ ರಜೆ, 26ರಂದು ಯುಎಫ್‌ಬಿಯು ಮತ್ತೆ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದು, ಅಂದೂ ಸಹ ಬ್ಯಾಂಕುಗಳಿಗೆ ರಜೆಯ ಸಾಧ್ಯತೆ ಇದೆ. ಡಿಸೆಂಬರ್ 24 ಸೋಮವಾರ ಮಾತ್ರ ಬ್ಯಾಂಕುಗಳು ಕಾರ್ಯನಿರ್ವಹಿಸಲಿದ್ದು, ನಾಳೆಯಿಂದ ಬ್ಯಾಂಕ್ ಮುಷ್ಕರದ ನಂತರ ಮುಂದಿನ ನಾಲ್ಕೈದು ದಿನ ಬ್ಯಾಂಕುಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಅಗತ್ಯದ ಬ್ಯಾಂಕಿಂಗ್ ವ್ಯವಹಾರಗಳನ್ನು ಇಂದೇ ಮುಗಿಸುವುದು ಸೂಕ್ತವಾಗಿದೆ.
ಬೇಡಿಕೆಗಳು:
- ಸಂಪೂರ್ಣ ಮೆಂಡೆಟ್‌ನ್ನು ಜಾರಿಗೊಳಿಸಬೇಕು.
- 11ನೇ ದ್ವಿತೀಯ ವೇತನ ಒಪ್ಪಂದವನ್ನು ಪೂರ್ಣವಾಗಿ ಜಾರಿಗೊಳಿಸಬೇಕು.
- ನೌಕರರ ವೇತನ ಪರಿಷ್ಕರಣೆಯನ್ನು ಶೀಘ್ರವಾಗಿ ಹಾಗೂ ಸಂಪೂರ್ಣವಾಗಿ ಜಾರಿಗೊಳಿಸಬೇಕು.
- ಅಧಿಕಾರಿಗಳ ಕೆಲಸದಲ್ಲಿ ಸಮತೋಲನ ತರಲು ಐದು ದಿನಗಳ ಕೆಲಸದ ವಾರವನ್ನು ಪ್ರಾರಂಭಿಸಬೇಕು.
- ನಿವೃತ್ತ ಬ್ಯಾಂಕ್ ಉದ್ಯೋಗಿಗಳ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿಯಲ್ಲಿ ಸುಧಾರಣೆ ಮಾಡಬೇಕು.
- ಮೂಲ ಬ್ಯಾಂಕ್ ವ್ಯವಹಾರಕ್ಕೆ ಆದ್ಯತೆ ಹಾಗೂ ಬ್ಯಾಂಕೇತರ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ವಿಧಿಸಬೇಕು.
- ನೂತನ ಪಿಂಚಣಿಯನ್ನು ರದ್ದುಮಾಡಿ, ನಿರ್ದಿಷ್ಟ ಪಿಂಚಣಿಯನ್ನು ಜಾರಿಗೊಳಿಸಬೇಕು.
- ಪ್ರಾದೇಶಿಕ ಬ್ಯಾಂಕುಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಂತೆ ಪಿಂಚಣಿ ಸೌಲಭ್ಯ ಸೇರಿ ಎಲ್ಲಾ ಸವಲತ್ತುಗಳಲ್ಲಿರುವ ತಾರತಮ್ಯ ನಿವಾರಿಸಬೇಕು.
- ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡ ಬ್ಯಾಂಕುಗಳ ವಿಲೀನವನ್ನು ರದ್ದುಪಡಿಸಬೇಕು.