(ನ್ಯೂಸ್ ಕಡಬ) newskadaba.com ಮಂಗಳೂರು ಡಿಸೆಂಬರ್.15, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಂತ ಜಮೀನು ಇರುವ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು, ಇರುವ ಮನೆ ವಿಸ್ತರಿಸಲು ಬಯಸುವ, ವಾರ್ಷಿಕ 3 ಲಕ್ಷ ಆದಾಯ ಹೊಂದಿರುವ ಕುಟುಂಬಗಳಿಗೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ತಲಾ ಒಂದು ಕುಟುಂಬಕ್ಕೆ ರೂ. 1.50 ಲಕ್ಷ ಸಹಾಯಧನ ದೊರೆಯಲಿದೆ.

ಸರ್ವರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಜೂನ್ 2015 ರಲ್ಲಿ ಜಾರಿಗೊಳಿಸಲಾಗಿದೆ. ಹೊಸದಾಗಿ ಮನೆ ನಿರ್ಮಿಸಿಕೊಳ್ಳುವುದಾದಲ್ಲಿ ಅಂಥಹ ಕುಟುಂಬವು ಸ್ವಂತ ಹೆಸರಿನಲ್ಲಿ ನಿವೇಶನ ಹೊಂದಿರಬೇಕು ಅಥವಾ ಕಚ್ಚಾ ಮನೆ ಹೊಂದಿರಬೇಕು ಮತ್ತು ಸೂಕ್ತ ಭೂದಾಖಲೆಗಳನ್ನು ಹೊಂದಿರಬೇಕು.
ಜೂನ್ 2015 ರ ಅನಂತರ ಪ್ರಾರಂಭಗೊಂಡು ಅಪೂರ್ಣಗೊಂಡಿರುವ ಮನೆಗಳನ್ನು ಷರತ್ತುಗಳ ಅನ್ವಯ ಈ ಯೋಜನೆಯಡಿ ಪರಿಗಣಿಸಬಹುದಾಗಿದೆ. ಈಗಾಗಲೇ 21 ಚ.ಮೀ. (226 ಚದರ ಅಡಿ) ಕಾರ್ಪೆಟ್ ವಿಸ್ತೀರ್ಣದ ಚಿಕ್ಕ ಮನೆ ಹೊಂದಿರುವ, ಪಕ್ಕಾ ಮನೆ ಹೊಂದಿದ್ದಲ್ಲಿ ಅಂತಹ ಕುಟುಂಬಗಳು ಕನಿಷ್ಟ 9 ಚ.ಮೀ (96 ಚದರ ಅಡಿ) ವಿಸ್ತೀರ್ಣದ ಹೆಚ್ಚುವರಿ ಕೊಠಡಿಯನ್ನು ನಿರ್ಮಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಬಹುದು. ಫಲಾನುಭವಿಗಳ ಪಟ್ಟಿಗೆ ಯಾವುದೇ ಸಮಿತಿಯ ಅನುಮೋದನೆಯ ಅಗತ್ಯವಿಲ್ಲ. ಫಲಾನುಭವಿಗಳು ನಿರ್ಮಿಸುವ ಮನೆಯ ಜಿಪಿಎಸ್ ಫೊಟೋ ಆಧರಿಸಿ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ 4 ಕಂತುಗಳಲ್ಲಿ ಅನುದಾನ ದೊರೆಯಲಿದೆ.

ಅರ್ಹ ಫಲಾನುಭವಿಗಳು ಅರ್ಜಿ ನಮೂನೆಯೊಂದಿಗೆ ಅರ್ಜಿದಾರರ ಫೊಟೋ, ಆಧಾರ್ ಕಾರ್ಡ್ (ಕುಟುಂಬದ ಎಲ್ಲಾ ಸದಸ್ಯರ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು( ಆರ್.ಟಿ.ಸಿ., ಖಾತಾ ನಕಲು, ನಿವೇಶನದ ನಕ್ಷೆ), ಕಟ್ಟಡ ನಿರ್ಮಾಣ ಪರವಾನಿಗೆ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ವಿವರಗಳ ನಕಲು ಪ್ರತಿಯೊಂದಿಗೆ ಹಾಗೂ ತನ್ನ ಹೆಸರಿನಲ್ಲಿ ಈಗಾಗಲೇ ಪಕ್ಕ ಮನೆ ಇಲ್ಲವೆಂದು ಅಫಿದಾವಿತ್‍ಗಳನ್ನು ನಗರ ಬಡತನ ನಿರ್ಮೂಲನ ಕೋಶ, ಮಂಗಳೂರು ಮಹಾನಗರಪಾಲಿಕೆ ಲಾಲ್‍ಬಾಗ್ ಕಚೇರಿಗೆ 7 ದಿನಗಳೊಳಗಾಗಿ ಸಲ್ಲಿಸಲು ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ ಇವರ ಪ್ರಕಟಣೆ ತಿಳಿಸಿದೆ.
