(ನ್ಯೂಸ್ ಕಡಬ) newskadaba.com ಕಡಬ, ನ.02. ಎಟಿಎಂ ಕಾರ್ಡ್ ನಿಷ್ಕ್ರಿಯಗೊಂಡಿದೆ ಎಂದು ನಂಬಿಸಿ ಕಡಬದ ವ್ಯಕ್ತಿಯೋರ್ವರಿಂದ 49997 ರೂ.ಗಳನ್ನು ದೋಚಿರುವ ಘಟನೆ ಅಕ್ಟೋಬರ್ 29 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಡಬದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹಿಂದಿರುವ ಪಿಜಕ್ಕಳ ನಿವಾಸಿ ರವೀಂದ್ರ (ಹೆಸರು ಬದಲಾಯಿಸಲಾಗಿದೆ) ಎಂಬವರ ಮೊಬೈಲಿಗೆ ಅಕ್ಟೋಬರ್ 29 ರಿಂದ ಕರೆಯೊಂದು ಬಂದಿದ್ದು, ಹಿಂದಿಯಲ್ಲಿ ಮಾತು ಆರಂಭಿಸಿದ ಆ ವ್ಯಕ್ತಿಯು ನಿಮ್ಮ ಎಟಿಎಂ ಕಾರ್ಡ್ ನ ಅವಧಿ ಮುಗಿದಿರುವುದರಿಂದ ತಕ್ಷಣವೇ ಕಾರ್ಡ್ ಸಂಖ್ಯೆಯನ್ನು ತಿಳಿಸಿದರೆ ಪೋಸ್ಟ್ ಮುಖಾಂತರ ನಿಮ್ಮ ವಿಳಾಸಕ್ಕೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದ್ದಾನೆ. ಕಾರ್ಡ್ ಸಂಖ್ಯೆ ನೀಡಲು ರವೀಂದ್ರರು ಹಿಂಜರಿದಾಗ ತಕ್ಷಣವೇ ಸಂಖ್ಯೆಯನ್ನು ನೀಡದಿದ್ದಲ್ಲಿ ಕಳ್ಳರು ಖಾತೆಗೆ ಕನ್ನ ಹಾಕುವ ಸಂಭವವಿದೆ ಎಂದು ನಂಬಿಸಿದ್ದಾನೆ. ರವೀಂದ್ರರು ಆ ವ್ಯಕ್ತಿಗೆ ಕಾರ್ಡ್ ಸಂಖ್ಯೆಯನ್ನು ನೀಡಿದ್ದಲ್ಲದೆ, ಒಟಿಪಿ ಸಂಖ್ಯೆಯನ್ನೂ ನೀಡಿದ್ದು, ನಿಮಿಷಗಳೊಳಗಾಗಿ 19999 ರೂ. ನಂತೆ ಎರಡು ಸಲ ಹಾಗೂ ಐದು ನಿಮಿಷ ಕಳೆದ ನಂತರ 9999 ರೂ. ಗಳನ್ನು ಖಾತೆಯಿಂದ ವರ್ಗಾಯಿಸಲಾಗಿದೆ. ತಕ್ಷಣವೇ ಎಚ್ಚೆತ್ತ ರವೀಂದ್ರ ಬ್ಯಾಂಕ್ ಗೆ ತೆರಳಿ ತನ್ನ ಖಾತೆಯಲ್ಲಿನ ವ್ಯವಹಾರವನ್ನು ಸ್ಥಗಿತಗೊಳಿಸಿದ್ದರಿಂದ ಖಾತೆಯಲ್ಲಿದ್ದ ಲಕ್ಷಕ್ಕೂ ಮಿಕ್ಕಿದ ಹಣ ಬಾಕಿಯುಳಿದಿದೆ. ಇತ್ತ ತಾನು ಎಟಿಎಂ ಕಾರ್ಡ್ ಸಂಖ್ಯೆಯನ್ನು ನೀಡಿ ಮೋಸಹೋಗಿದ್ದು, ಪೊಲೀಸ್ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ.