(ನ್ಯೂಸ್ ಕಡಬ) newskadaba.com ಹಾಸನ, ಅ.31. ದುಬಾರಿ ಬೆಲೆಯ ಫಾರ್ಚುನರ್ ಕಾರು ಅರ್ಧ ಬೆಲೆಗೆ ಸಿಗುತ್ತದೆ ಎಂದು ನಂಬಿದ ಬಾಡಿ ಬಿಲ್ಡರ್ ಗಳ ತಂಡವೊಂದು ನವದೆಹಲಿಗೆ ತೆರಳಿ ಅತ್ತ ಕಾರೂ ಇಲ್ಲದೆ, ಇತ್ತ ಹಣವೂ ಇಲ್ಲದೆ ದರೋಡೆಗೊಳಗಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಶ್ವೇಶ್ವರಯ್ಯ ಬಡಾವಣೆಯ ನಂದಕುಮಾರ್, ಅವರ ಪುತ್ರ ನೀಲ್‌ಕುಮಾರ್, ಮತ್ತು ಸೋದರಿ ಪುತ್ರ ವಿಕ್ರಂ ಎಂಬವರು ಫಾರ್ಚುನರ್ ಕಾರನ್ನು ಖರೀದಿಸಲೆಂದು ಆನ್‌ಲೈನ್‌ನಲ್ಲಿ ಹುಡುಕಾಡುತ್ತಿದ್ದಾಗ 7 ಲಕ್ಷ ರೂ.ಗಳಿಗೆ ಉತ್ತಮ ಗುಣಮಟ್ಟದ ಫಾರ್ಚುನರ್ ಕಾರಿನ ಜಾಹೀರಾತು ಹಾಕಿರುವುದು ಕಂಡುಬಂದಿದೆ. ತಕ್ಷಣವೇ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಬೆಂಗಳೂರಿನಲ್ಲಿ ನೆಲೆಸಿದ್ದ ವೇಳೆ ಖರೀದಿಸಿದ್ದ ಕಾರು ಬೆಂಗಳೂರು ನೋಂದಣಿ ಸಂಖ್ಯೆ ಹೊಂದಿದ್ದು, ಪ್ರಸ್ತುತ ಹೊಸದಿಲ್ಲಿಯಲ್ಲಿರುವ ಕಾರಣ ಇಲ್ಲಿಗೇ ಬಂದು ಖರೀದಿಸಬೇಕಾಗುತ್ತದೆ. ನೀವು ವಿಮಾನದ ಮೂಲಕ ಬಂದಲ್ಲಿ ನಾವೇ ಬಂದು ಕರೆದುಕೊಂಡು ಹೋಗುತ್ತೇವೆ. ಬಂದು-ಹೋಗುವ ಖರ್ಚನ್ನು ವಜಾ ಮಾಡಿಕೊಂಡೇ ಉಳಿದ ಹಣ ನೀಡಿ, ಎಂದು ಮೂಲಕ ಯಾಮಾರಿಸಿದ್ದಾನೆ.
ಆದರೆ 2016 ರ ತನಕವೂ ದಾಖಲೆಗಳು ಸಮರ್ಪಕವಾಗಿರುವುದನ್ನು ನಂದಕುಮಾರ್ ಖಚಿತಪಡಿಸಿಕೊಂಡ ಕಾರಣ ದೆಹಲಿಗೆ ವಿಮಾನದ ಮೂಲಕ ತೆರಳಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಕಾರಿನ ಮಾಲೀಕ ಎನ್ನಲಾದ ವ್ಯಕ್ತಿಯನ್ನು ಸಂಪರ್ಕಿಸಿದಾಗ ”ನಮ್ಮ ಚಾಲಕ ಬಂದಿಲ್ಲ. ದಯವಿಟ್ಟು ಎಚ್‌ಪಿಆರ್ ಚೌಕ್ (ಹೊಸದಿಲ್ಲಿಯಿಂದ 25 ಕಿ.ಮೀ. ದೂರ) ಬಂದುಬಿಡಿ. ಅಲ್ಲಿಂದ ನಮ್ಮವರು ಕರೆದುಕೊಂಡು ಬರುತ್ತಾರೆ, ಎಂದು ತಿಳಿಸಿದ್ದಾನೆ. ಇಲ್ಲಿವರೆಗೆ ಬಂದಾಗಿದ್ದು, ಇನ್ನು 25 ಕಿ.ಮೀ. ಹೋಗದಿದ್ದರೆ ಬಂದ ಕೆಲಸ ಆಗುವುದಿಲ್ಲ ಎಂದು ನಂಬಿದ ಇವರು ಟ್ಯಾಕ್ಸಿ ಹಿಡಿದು ಎಚ್‌ಪಿಆರ್ ಚೌಕ್‌ಗೆ ತೆರಳಿದ್ದಾರೆ.
ಎಚ್‌ಪಿಆರ್ ಚೌಕಿಗೆ ತಲುಪಿದ ಕೂಡಲೇ ಅಲ್ಲಿ ಮಗದೋರ್ವ ಟ್ಯಾಕ್ಸಿ ಚಾಲಕನನ್ನು ಪರಿಚಯಿಸಿ ತಾನು ಸೂಚಿಸಿದ ಸ್ಥಳಕ್ಕೆ ಕರೆದುಕೊಂಡು ಬರುವಂತೆ ಅವನಿಗೆ ಹೇಳಿದ್ದಾರೆ. ಕಾರಿನ ಚಾಲಕ ಮೂವರನ್ನು ಹತ್ತಿಸಿಕೊಂಡು ಪುನಾನ ಎಂಬ ಸ್ಥಳಕ್ಕೆ ಸುತ್ತಿ ಬಳಸಿಕೊಂಡು ಮುಸ್ಸಂಜೆ ವೇಳೆಗೆ ಕರೆದೊಯ್ಯುತ್ತಿದ್ದಾಗ ಹರಿಯಾಣದ ಗಡಿಗೆ ಹೊಂದಿಕೊಂಡಂತಿರುವ ಟಿಕ್ರಿ ಗ್ರಾಮಕ್ಕೆ ತೆರಳುವ ನಿಗೂಢ ಪ್ರದೇಶದಲ್ಲಿ ಎದುರಿನಿಂದ ಸ್ಕಾರ್ಪಿಯೋ ಹಾಗೂ ಬೈಕ್‌ಗಳಲ್ಲಿ ಒಂಭತ್ತು ಮಂದಿ ಪ್ರತ್ಯಕ್ಷರಾಗಿ ಕಾರನ್ನು ಅಡ್ಡಗಟ್ಟಿದ್ದಲ್ಲದೆ ಬಂದೂಕು ತೋರಿಸಿ ಜೇಬಿನಲ್ಲಿದ್ದ 70 ಸಾವಿರ ನಗದು, 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ, ನಾಲ್ಕು ಮೊಬೈಲ್, ಬಟ್ಟೆಗಳನ್ನು ದರೋಡೆಗೈದಿದ್ದಾರೆ. ಆ ಕ್ಷಣದಲ್ಲೇ ದೂರದಲ್ಲಿ ಟ್ರ್ಯಾಕ್ಟರ್ ಬರುತ್ತಿದ್ದುದನ್ನು ಕಂಡು ಮೂವರನ್ನು ಅಲ್ಲೇ ಬಿಟ್ಟು ಬಂದ ವಾಹನದಲ್ಲಿ ಪರಾರಿಯಾಗಿದ್ದಾರೆ.
ದರೋಡೆಗೊಳಗಾದ ವಿಚಾರ ತಿಳಿದ ಗ್ರಾಮಸ್ಥರೊಬ್ಬರು 500 ರೂ. ನೀಡಿ ಸಮೀಪದ ಟಿಕ್ರಿ ಗ್ರಾಮ ವ್ಯಾಪ್ತಿಯ ಪುನಾನ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ನಂದಕುಮಾರ್ ರ ಪರಿಸ್ಥಿತಿ ಕಂಡ ಪುನಾನ ಪೊಲೀಸರು ಎರಡು ಸಾವಿರ ರೂ. ಕೊಟ್ಟು ಊರಿಗೆ ವಾಪಸ್ ಕಳುಹಿಸಿದ್ದಾರೆ. ರೈಲಿನಲ್ಲಿ ಬೆಂಗಳೂರಿಗೆ ಹಿಂತಿರುಗಿ ಅಲ್ಲಿಂದ ಬಸ್ಸಿನಲ್ಲಿ ಹಾಸನಕ್ಕೆ ಬಂದಿದ್ದಾರೆ. ವಿಪರ್ಯಾಸವೆಂದರೆ ಅವರನ್ನು ನಂಬಿಸಿದ ವ್ಯಕ್ತಿ ಈಗಲೂ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿದ್ದು, ನಮ್ಮ ವೃತ್ತಿಯೇ ಇದು. ನೀವು ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾನೆ. ಕಡಿಮೆ ಬೆಲೆಯಲ್ಲಿ ಕಾರನ್ನು ಪಡೆಯುವ ಉದ್ದೇಶದಿಂದ ದೂರದ ಊರುಗಳಿಗೆ ತೆರಳುವವರು ಎಚ್ಚರಿಕೆ ವಹಿಸಬೇಕಾಗಿದೆ.
ಕೃಪೆ: ವಿಜಯ ಕರ್ನಾಟಕ