ಕುಪ್ಪೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕೇರಳದ ಉಗ್ರಗಾಮಿಯ ಬಂಧನ ► ರಾಜ ಮರ್ಯಾದೆಯಲ್ಲಿ ಮೆರೆಯುತ್ತಿದ್ದ ನಟೋರಿಯಸ್ ಗೆ ಕೈಕೋಳ ತೊಡಿಸಿದ ಉಪ್ಪಿನಂಗಡಿ ಪೊಲೀಸರು ► 50 ಮಂದಿ ಅಂಗರಕ್ಷಕರ ನಡುವೆ ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾದರೂ ಹೇಗೆ ಗೊತ್ತೇ..?

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.29. ಕೇರಳದ ನಟೋರಿಯಸ್ ಕ್ರಿಮಿನಲ್ ಉಣ್ಣಿಕೃಷ್ಣನ್ ಕೊಲೆ ಪ್ರಕರಣದ ಹಿಂದಿನ ರಹಸ್ಯವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಭೂಗತ ಜಗತ್ತಿನಲ್ಲಿ ತನ್ನನ್ನು ಮೀರಿ ಬೆಳೆಯುತ್ತಿದ್ದಾನೆ ಎಂಬ ಕಾರಣಕ್ಕೆ ಕೇರಳದ ಕುಖ್ಯಾತ ರೌಡಿ ಅನಾಸ್ ಎಂಬಾತನ ಕುಮ್ಮಕ್ಕಿನಿಂದ ಈ ಹತ್ಯೆ ನಡೆದಿರುವುದಾಗಿ ತಿಳಿದು ಬಂದಿದೆ.

ಕೇರಳದ ಎರ್ನಾಕುಲಂನ ಕುನ್ನತನಾಡು ತಾಲೂಕಿನ ಅರೆಕ್ಕಿಪ್ಪಾಡಿ ನಿವಾಸಿ ಉಣ್ಣಿಕೃಷ್ಣನ್ ಎಂಬಾತನನ್ನು ಕಳೆದ ಸೆ 1 ರಂದು ಉಪ್ಪಿನಂಗಡಿಯ ಪರಿಸರದಲ್ಲಿ ಕೊಲೆಗೈದು ಕುಪ್ಪೆಟ್ಟಿ ಸಮೀಪ ಸೇತುವೆ ಕೆಳಗಡೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಅನಾಸ್‍ನ ಬಂಧನವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಅನಾಸ್‍ನ ಸಹಚರರಾದ ಕಂಬಿನಿಪ್ಪಡಿ ಕೊಟ್ಟಕ್ಕಾಕಾತ್ ಮನೆಯ ಔರಂಗಝೀಬ್ (37), ಪಾಲಕ್ಕಾಡು ಜಿಲ್ಲೆಯ ಅಲೆತ್ತೂರು ತಾಲೂಕಿನ ಚುಂದಕಾಡು ಕಾವಶ್ಯೇರಿ ಗ್ರಾಮದ ಕೊಕ್ರತ್ತಲ್ ನಿವಾಸಿ ಮಹಮ್ಮದ್ ಶಮನಾಝ್ (23) ಹಾಗೂ ಎರ್ನಾಕುಲಂ ಜಿಲ್ಲೆಯ ಪಲ್ಲಿತ್ತಾಯ ತಾಲೂಕಿನ ಎಲಿಯಟೈಲ್ ಮನೆಯ ಜೀತು ಸಾಜಿ (23) ಹಾಗೂ ಎರ್ನಾಕುಲಂ ಜಿಲ್ಲೆಯ ತಾಯಕಟ್ಟಕೆರೆ ತಾಲೂಕಿನ ಕುಂಗತ್ತಿ ಪರಂಬಿಲ್‍ನ ಸುಹೈಲ್ ನಝರ್ (22) ಎಂಬವರ ಬಂಧನವಾಗಿದ್ದು, ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಪೆರಂಬವೂರು ತಾಲೂಕಿನ ವಂಗೂಲ ಗ್ರಾಮದ ಪುತ್ತನ್ ಪುರಂ ನಿವಾಸಿ ಕುಂಞ ಮುಹಮ್ಮದ್ ಎಂಬವರ ಪುತ್ರ ಅನ್ಸಾರ್ ಯಾನೆ ಅನಾಸ್ ಪಿ.ಕೆ. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ ಕೊಚ್ಚಿನ್‍ನಲ್ಲಿ ರೌಡಿ ಆಗಿದ್ದ ಶಾಬರ್ ಎಂಬಾತನ ಗ್ಯಾಂಗ್‍ಗೆ ಸೇರಿಕೊಳ್ಳುತ್ತಾನೆ. ಈ ಗ್ಯಾಂಗ್ ಕೊಚ್ಚಿನ್ ಅನ್ನು ಕೇಂದ್ರವಾಗಿಟ್ಟುಕೊಂಡು ಅಕ್ರಮ ಚಟುವಟಿಕೆ, ಸುಲಿಗೆ, ಅಪಹರಣ, ವಿದೇಶದಿಂದ ಗೋಲ್ಡ್ ಸ್ಮಗ್ಲಿಂಗ್ ಮುಂತಾದ ಅಕ್ರಮ ವ್ಯವಹಾರವನ್ನು ನಡೆಸುತ್ತಿತ್ತು. ಅಲ್ಲದೆ, ಶಾಬರ್‍ನೊಂದಿಗೆ ಕಾಶ್ಮೀರದ ಜಬ್ಬಾರ್ ಎಂಬಾತನ ಪರಿಯಚವಾಗಿ ಕಾಶ್ಮೀರದ ಉಗ್ರಗಾಮಿ ಚಟುವಟಿಕೆಗಳಿಗೆ ಶಾಬರ್ ಹಾಗೂ ಅನಾಸ್ ಸೇರಿಕೊಂಡು ದಕ್ಷಿಣ ಭಾರತದ ಯುವಕರನ್ನು ಕಳುಹಿಸಿಕೊಡುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ವಿಚಾರ ಕೇಂದ್ರೀಯ ತನಿಖಾ ತಂಡಕ್ಕೆ ಗೊತ್ತಾಗಿ ಅನಾಸ್ ಹಾಗೂ ಶಾಬರ್‍ನನ್ನು ಎನ್‍ಐಎ ತಂಡ ಬಂಧಿಸುತ್ತದೆ. ಸೂಕ್ತ ಸಾಕ್ಷಧಾರಗಳ ಕೊರತೆಯಿಂದ ಅನಾಸ್ ಒಂದೂವರೆ ವರ್ಷಗಳ ಕಾಲ ಜೈಲು ಶಿಕ್ಷೆಯ ಬಳಿಕ ಜಾಮೀನಿನಲ್ಲಿ ಬಿಡುಗಡೆ ಹೊಂದಿ, ಆರೋಪ ಮುಕ್ತನಾದರೆ, ಶಾಬರ್‍ನಿಗೆ ಜೀವಾವಧಿ ಶಿಕ್ಷೆಯಾಗುತ್ತದೆ. ಬಳಿಕ ತನ್ನ ಗುರು ಶಾಬರ್ ಗ್ಯಾಂಗ್‍ನ ನಾಯಕತ್ವವನ್ನು ಅನಾಸ್ ವಹಿಸಿಕೊಳ್ಳುತ್ತಾನೆ. ಶಾಬರ್‍ನ ಭೂಗತ ಸಾಮ್ರಾಜ್ಯವನ್ನು ಇನ್ನಷ್ಟು ವ್ಯಾಪಿಸಿದ್ದ ಈತ ಸುಮಾರು 450ರಿಂದ 500ರಷ್ಟು ಯುವಕರನ್ನು ಇಟ್ಟುಕೊಂಡು ಕೇರಳವಲ್ಲದೇ, ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿಯೂ ತನ್ನ ಅಕ್ರಮ ವ್ಯವಹಾರಗಳನ್ನು ನಡೆಸುತ್ತಿದ್ದ.

ಈತನು ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಲ್ಲಿ ಈ ಪ್ರಕರಣಗಳಿಂದ ಪಾರಾಗಲು ಮಾಧ್ಯಮ, ರಾಜಕೀಯ ಪಕ್ಷ, ವಕೀಲರ ಸಹಕಾರವನ್ನು ಪಡೆಯಲು ಈತನ ತಂಡದಲ್ಲಿ ಯುವಕರಿರುತ್ತಿದ್ದರು. ಯಾವುದೇ ರೀತಿಯ ಕೇಸ್ ದಾಖಲಾದರೂ ಕೂಡಲೇ ಪೊಲೀಸರಿಗೆ ಆರೋಪಿಗಳನ್ನು ಶರಣಾಗತಿ ಮಾಡಿಸಿ ಪೊಲೀಸರ ವಿಶ್ವಾಸ ಪಡೆಯುತ್ತಿದ್ದನು. ಸದ್ರಿ ಈತನ ವಿರುದ್ಧ ಕೊಲೆಗೆ ಯತ್ನ, ಹಲ್ಲೆ, ಗುಂಪುಗಾರಿಕೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇರಳ ರಾಜ್ಯದ ತಿರುವನಂತಪುರದ ವೆಲಿಯೂರು ಪೆÇಲೀಸ್ ಠಾಣೆಯಲ್ಲಿ 01, ಪುರುತ್ತಪುಡಿ ಪೊಲೀಸ್ ಠಾಣೆಯಲ್ಲಿ 01, ಎಡತ್ತಲ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಪೆರಂಬೂರು ಪೊಲೀಸ್ ಠಾಣೆಯಲ್ಲಿ 06 ಪ್ರಕರಣಗಳಿವೆ. ಆದರೆ ಈತ   ಕೇರಳದ ಪೊಲೀಸ್‍ನವರಿಗೆ ಸಿಗದೆ ಐಶಾರಾಮಿ ಹೊಟೇಲ್, ಮನೆ, ರೆಸಾರ್ಟ್‍ಗಳಲ್ಲಿ ತಲೆಮರೆಸಿಕೊಂಡಿರುತ್ತಿದ್ದನು. ವಿದೇಶದಿಂದ ಕೇರಳ ವಿಮಾನ ನಿಲ್ದಾಣದ ಮೂಲಕ ದೇಶಕ್ಕೆ ರವಾನೆಯಾಗುವ ಚಿನ್ನವೆಲ್ಲಾ ಈತನ ಗಮನಕ್ಕೆ ಬಂದು ವಿನಿಮಯವಾಗುತ್ತಿತ್ತು. ಕೇರಳದ ಬಹುತೇಕ ಎಲ್ಲಾ ಕೈಗಾರಿಕೆಗಳೂ ಈತನಿಗೆ ಹಪ್ತಾ ನೀಡಬೇಕಾಗಿತ್ತು. ಭೂ ವಿವಾದಗಳನ್ನು ತನ್ನ ರೌಡಿಗಳ ಮೂಲಕ ಜೀವ ಬೆದರಿಕೆಯೊಡ್ಡಿ ಬಗೆಹರಿಸುತ್ತಿದ್ದ. ಈತನ ಕಾರ್ಯವ್ಯಾಪ್ತಿ ದ.ಕ. ಜಿಲ್ಲೆಯಲ್ಲೂ ವಿಸ್ತರಿಸಿತ್ತು.

ದಿನಂಪ್ರತಿ ವೈದ್ಯರನ್ನು, ವಕೀಲರನ್ನೂ ತನ್ನ ಜೊತೆ ಇರಿಸಿಕೊಳ್ಳುವ ಈತ, ತನ್ನ ದೈನಂದಿನ ವ್ಯವಹಾರಕ್ಕೆ ಲಕ್ಷಗಟ್ಟಲೆ ಖರ್ಚು ಮಾಡುತ್ತಿದ್ದ. ಎಲ್ಲೆಡೆ ಸಂಚರಿಸಬೇಕಾದರೆ ನಾಲ್ಕೈದು ವಾಹನಗಳಲ್ಲಿ 50ಕ್ಕೂ ಮಿಗಿಲಾದ ಅಂಗರಕ್ಷಕರನ್ನು ಬೆಂಗಾವಲಾಗಿ ಕರೆದೊಯ್ಯುತ್ತಿದ್ದ. ಕೇರಳದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ಅನಾಸ್‍ನ ತಂಡದಲ್ಲಿ ಅನಾಸ್ ಬಳಿಕದ ಸ್ಥಾನವನ್ನು ಉಣ್ಣಿಕೃಷ್ಣನ್ ಹೊಂದಿದ್ದ. ತಂಡದ ಉಳಿದ ಸದಸ್ಯರೆಲ್ಲರೂ ಅನಾಸ್‍ಗೆ ನೀಡಿದ ಗೌರವವನ್ನೇ ಉಣ್ಣಿಕೃಷ್ಣನ್‍ಗೆ ನೀಡಬೇಕಾಗಿತ್ತು. ತಂಡದ ಎಲ್ಲಾ ಚಟುವಟಿಕೆಯು ಉಣ್ಣಿಕೃಷ್ಣನ್ ನೇತೃತ್ವದಲ್ಲಿ ನಡೆಯುತ್ತಿದ್ದು, ಮುಖ್ಯವಾಗಿ  ಇಲಾಖಾಧಿಕಾರಿಗಳನ್ನು ನೋಡಿಕೊಳ್ಳುವಲ್ಲಿ ಪ್ರಮುಖ ಕಾರ್ಯ ಉಣ್ಣಿಕೃಷ್ಣನ್‍ನದಾಗಿತ್ತು. ಆದರೆ ಇತ್ತೀಚೆಗೆ ಉಣ್ಣಿಕೃಷ್ಣನ್ ತನಗಿಂತ ಹೆಚ್ಚು ಇಲಾಖಾಧಿಕಾರಿಗಳ ಗೌರವಕ್ಕೆ ಪಾತ್ರರಾಗುತ್ತಿದ್ದ ವಿಚಾರ ಹಾಗೂ ತನ್ನ ಅರಿವಿಗೆ ಬಾರದೇ ತಾನೇ ಮುಂದಾಗಿ ಕೆಲವೊಂದು ಡೀಲ್ ನಡೆಸಿರುವುದು ಅನಾಸ್‍ಗೆ ತಿಳಿದುಬಂದಾಗ ಇಂದಲ್ಲ ನಾಳೆ ಈತ ತನ್ನ ಭೂಗತ ಸಾಮ್ರಾಜ್ಯಕ್ಕೆ ಕುತ್ತು ತರುತ್ತಾನೆಂದು ಭಾವಿಸಿ, ತನ್ನದೇ ಸಹಚರರಿಂದ ಯೋಜಿತವಾಗಿ ಉಣ್ಣಿಕೃಷ್ಣನ್‍ನನ್ನು ಉಪ್ಪಿನಂಗಡಿಯಲ್ಲಿ ಹತ್ಯೆ ಮಾಡಿಸಿರುವುದಾಗಿ ಅನಾಸ್ ತನಿಖೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ಉಣ್ಣಿಕೃಷ್ಣನ್ ಕೊಲೆಯ ತನಿಖೆ ನಡೆಸುತ್ತಿದ್ದ ಉಪ್ಪಿನಂಗಡಿ ಪೊಲೀಸರಿಗೆ ಪ್ರಕರಣದಲ್ಲಿ ಬಂಧಿತರಾದ ವ್ಯಕ್ತಿಗಳಲ್ಲದೆ ಬೇರೊಬ್ಬ ಪ್ರಭಾವಿ ವ್ಯಕ್ತಿಯೂ ಇದರಲ್ಲಿ ಒಳಗೊಂಡಿರುವ ಬಗ್ಗೆ ಸುಳಿವು ಲಭಿಸುತ್ತದೆ. ಕೂಡಲೇ ಕಾರ್ಯತಂತ್ರ ಹೆಣೆದ ಪೊಲೀಸರು ಕೊಲೆಯ ಮೂಲ ಹುಡುಕಿ ಕೇರಳ ಕೇಂದ್ರೀಕೃತ ದಕ್ಷಿಣ ಭಾರತದಲ್ಲಿ ಭೂಗತ ಚಟುವಟಿಕೆ ನಡೆಸುತ್ತಿದ್ದ ಅನಾಸ್‍ನನ್ನು ವಶಕ್ಕೆ ಪಡೆಯಲು ಮುಂದಾಗುತ್ತಾರೆ. ಕೇರಳ ಪೊಲೀಸರೊಂದಿಗೆ ನಿಕಟ ಸಂಪರ್ಕವಿರಿಸಿರುವ ಅನಾಸ್ ನನ್ನು ಪತ್ತೆ ಹಚ್ಚುವುದು ಹಾಗೂ ವಶಕ್ಕೆ ಪಡೆಯುವುದು ಸುಲಭ ಸಾಧ್ಯವಿರಲಿಲ್ಲ. ಆತನ ಚಲನವಲನದ ಮೇಲೆ ನಿಗಾವಿರಿಸಿದ ಉಪ್ಪಿನಂಗಡಿ ಪೊಲೀಸರಿಗೆ ಆತನ ಸ್ಪಷ್ಟ ವಿಳಾಸ ತಿಳಿದಿರಲಿಲ್ಲ. ಎರ್ನಾಕುಲಂ ನಿವಾಸಿಯಾಗಿರುವ ಈತ ಕೊಚ್ಚಿ ಬಳಿಯ ಕಾಕನಾಡ್‍ನ 18 ಮಹಡಿಯ ಐಷಾರಾಮಿ ಫ್ಲಾಟ್‍ನ ಕೊನೆಯ ಮಹಡಿಯಲ್ಲಿ ವೈದ್ಯರೋರ್ವರ ಹೆಸರಿನಲ್ಲಿರುವ ಪ್ಲಾಟ್‍ವೊಂದರಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉಪ್ಪಿನಂಗಡಿ ಎಸ್‍ಐ ನಂದಕುಮಾರ್ ನೇತೃತ್ವದ ಪೊಲೀಸ್ ತಂಡ ಕಾನೂನು ನೆಲೆಗಟ್ಟಿನಲ್ಲಿ ಸಾಗಿ ಸಿನಿಮೀಯ ಶೈಲಿಯಲ್ಲಿ ಸಾಹಸಮಯ ರೀತಿಯಲ್ಲಿ ಆತನಿರುವ ಪ್ಲಾಟ್‍ಗೆ ದಾಳಿ ನಡೆಸುತ್ತದೆ. ಭಾರೀ ಪ್ರಹಸನದ ಬಳಿಕ ಪೊಲೀಸ್ ವಶನಾದ ಅನಾಸ್‍ನನ್ನು 400 ಕಿ.ಮೀ. ಕೇರಳ ಮಾರ್ಗವನ್ನು ದಾಟಿ ಕರ್ನಾಟಕ ಗಡಿಗೆ ತರಲು ಎದುರಾಗಬಹುದಾದ ಎಲ್ಲಾ ಅಪಾಯಗಳನ್ನು ಮೊದಲೇ ಅಂದಾಜಿಸಿದ್ದ ಪೊಲೀಸರು ಪ್ರತಿತಂತ್ರ ಹೂಡಿ ಆತನನ್ನು ಉಪ್ಪಿನಂಗಡಿಗೆ ಕರೆ ತರುವಲ್ಲಿ ಯಶಸ್ವಿಯಾಗುತ್ತಾರೆ.

ಮೊದಲು ವಿಚಾರಣೆ ನಡೆಸಿದ ಪೊಲೀಸರು, ಪ್ರಕರಣದಲ್ಲಿ ಆತನ ಕೃತ್ಯ ದೃಢಪಟ್ಟ ಬಳಿಕ ಆರೋಪಿಯನ್ನು ಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಭದ್ರತೆಯ ಲಾಕಪ್ ಇಲ್ಲದ ಕಾರಣ ಕೈ ಕೋಲ ಹಾಕಿ ಚಡ್ಡಿಯಲ್ಲಿಯೇ ಕುಳ್ಳಿರಿಸಿದರು. ಕೇರಳದಲ್ಲಿ ರಾಜ ಮರ್ಯಾದೆಯಲ್ಲಿ ದಿನ ಕಳೆಯುತ್ತಿದ್ದ ಅನಾಸ್ ಉಪ್ಪಿನಂಗಡಿಯಲ್ಲಿ ಸಾಮಾನ್ಯನಂತೆ ಪೊಲೀಸ್ ಕಸ್ಟಡಿಯಲ್ಲಿ ಉಳಿಯುವಂತಾಗಿರುವುದು ಗಮನಾರ್ಹವೆನಿಸಿದೆ. ಆತನಿಗೆ ರಾಜಾತಿಥ್ಯ ಒದಗಿಸಬೇಕೆಂಬ ಪ್ರಭಾವಿಗಳ ಒತ್ತಡಕ್ಕೂ ಮಣಿಯದೆ ಸಾಮಾನ್ಯ ಕೈದಿಯಂತೆ ಪರಿಗಣಿಸುವ ಮೂಲಕ ಪೊಲೀಸ್ ಅಧಿಕಾರಿಗಳು ಮೆರೆದ ಕರ್ತವ್ಯ ದಕ್ಷತೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ರವಿಕಾಂತೇಗೌಡ  ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಜಿತ್ ವಿ.ಜೆ. ಅವರ ನಿರ್ದೇಶನದಂತೆ ತನಿಖಾಧಿಕಾರಿಯಾದ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಶ್ರೀನಿವಾಸ್ ಬಿ.ಎಸ್., ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಗೋಪಾಲ ನಾಯ್ಕ ಮತ್ತು ಉಪ್ಪಿಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ನಂದ ಕುಮಾರ್ ಎಂ.ಎಂ. ನೇತೃತ್ವದಲ್ಲಿ ನಡೆದ ಈ ಪತ್ತೆ ಕಾರ್ಯದಲ್ಲಿ ಸಿಬ್ಬಂದಿಗಳಾದ ಎಎಸ್‍ಐ ಶಿವಪ್ಪ ಪೂಜಾರಿ, ಹರೀಶ್ಚಂದ್ರ, ಬಾಲಕೃಷ್ಣ ,ಚೋಮ ಪಿ., ಬಾಲಕೃಷ್ಣ, ಶಿವರಾಮ್, ದರ್ಣಪ್ಪ, ಅಬ್ದುಲ್ ಸಲೀಮ್, ಜಗದೀಶ್, ಮನೋಹರ ಪಿ.ಸಿ., ಪ್ರತಾಪ್, ಇರ್ಷಾದ್  ಹಾಗೂ ನಾರಾಯಣ ಗೌಡರವರು ಭಾಗವಹಿಸಿದ್ದು, ಈ ತಂಡವು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.

error: Content is protected !!

Join the Group

Join WhatsApp Group