ಅಮಲು ಪದಾರ್ಥ ನೀಡಿ ನಗ-ನಗದು ದೋಚಿದ ಅಪರಿಚಿತರು ► ಕಂಗಾಲಾದ ಉಡುಪಿ ರೈಲ್ವೇ ಯಾತ್ರಿ ಸಂಘದ ಪದಾಧಿಕಾರಿ

(ನ್ಯೂಸ್ ಕಡಬ) newskadaba.com ಉಡುಪಿ, ಅ.14. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪರಿಚಿತರು ನೀಡಿದ ಅಮಲು ಭರಿಸುವ ಮಜ್ಜಿಗೆಯನ್ನು ಸೇವಿಸಿ ಉಡುಪಿ ರೈಲ್ವೆ ಯಾತ್ರಿ ಸಂಘದ ಪದಾಧಿಕಾರಿಯೋರ್ವರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳೆದುಕೊಂಡ ಘಟನೆ ಶನಿವಾರದಂದು ಬೆಳಕಿಗೆ ಬಂದಿದೆ.

ಮಜ್ಜಿಗೆ ಸೇವಿಸಿ ಪ್ರಜ್ಞೆ ಕಳೆದುಕೊಂಡು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಉಡುಪಿ ಕಿನ್ನಿಮುಲ್ಕಿ ನಿವಾಸಿಯಾಗಿರುವ ರೈಲ್ವೆ ಯಾತ್ರಿ ಸಂಘದ ಕೋಶಾಧಿಕಾರಿ ರಾಮಚಂದ್ರ ಆಚಾರ್ಯ (60) ಹಾಗೂ ಅವರ ಅಕ್ಕ ಕಾರ್ಕಳ ಬೈಲೂರಿನ ಕೃಷ್ಣ ಭಟ್ ಎಂಬವರ ಪತ್ನಿ ರಾಧಮ್ಮ (75) ಎಂದು ಗುರುತಿಸಲಾಗಿದೆ. ಕಾರ್ಯ ನಿಮಿತ್ತ ನಾಸಿಕ್‌ಗೆ ತೆರಳಿದ್ದ ಇವರು ನಿಝಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಉಡುಪಿಗೆ ಹಿಂತಿರುಗುತ್ತಿದ್ದಾಗ ಸುಮಾರು 50-60ವರ್ಷ ಪ್ರಾಯದ ಇಬ್ಬರು ಅಪರಿಚಿತ ವ್ಯಕ್ತಿಗಳು, ರಾಧಮ್ಮ ಹಾಗೂ ರಾಮಚಂದ್ರ ಅವರನ್ನು ಪರಿಚಯಿಸಿಕೊಂಡು ಅವರ ಸ್ನೇಹ ಸಂಪಾದಿಸಿ ಮಜ್ಜಿಗೆ ಪ್ಯಾಕೆಟ್ ತಂದು ರಾಮಚಂದ್ರ ಹಾಗೂ ರಾಧಮ್ಮರಿಗೆ ನೀಡಿ, ಕುಡಿಯುವಂತೆ ಒತ್ತಾಯಿಸಿದ್ದು, ಹೀಗೆ ಒತ್ತಾಯಕ್ಕೆ ಮಣಿದ ಇವರಿಬ್ಬರು ಮಜ್ಜಿಗೆಯನ್ನು ಕುಡಿದಿದ್ದಾರೆ.

Also Read  ಕೇಂದ್ರ ಬಜೆಟ್ ಅಧಿವೇಶನ ಜ.31 ರಿಂದ ಆರಂಭ                         

ಸ್ವಲ್ಪ ಹೊತ್ತಿನಲ್ಲೇ ಇವರಿಬ್ಬರು ಪ್ರಜ್ಞೆ ತಪ್ಪಿ ನಿದ್ದೆಗೆ ಜಾರಿದರೆನ್ನಲಾಗಿದ್ದು, ಅ.12ರಂದು ನಸುಕಿನ ಒಂದೂವರೆ ಗಂಟೆ ಸುಮಾರಿಗೆ ರೈಲು ಕುಂದಾಪುರ ತಲುಪುವಾಗ ರಾಮಚಂದ್ರ ಆಚಾರ್ಯ ಎಚ್ಚರಗೊಂಡು ನೋಡಿದಾಗ ಕಿಸೆಯಲ್ಲಿದ್ದ 15 ಸಾವಿರ ರೂ., ಪ್ಯಾಂಟ್ ಕಿಸೆಯಲ್ಲಿದ್ದ 15 ಸಾವಿರ ರೂ., ಮೊಬೈಲ್, ನಾಣ್ಯಗಳು ಹಾಗೂ 2 ಸಾವಿರ ರೂ. ಮೌಲ್ಯದ ಹೊಸ ಬಟ್ಟೆಗಳು ಮತ್ತು ರಾಧಾಮ್ಮರ ಒಂದು ಕಿವಿಯ ಓಲೆ, ಎರಡು ಉಂಗುರ, ಒಂದು ಚಿನ್ನದ ಸರ, 15 ಸಾವಿರ ರೂ. ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳನ್ನು ಅಪರಿಚಿತರಿಬ್ಬರು ದೋಚಿಕೊಂಡು ಹೋಗಿರುವುದು ಗಮನಕ್ಕೆ ಬಂದಿದೆ. ಮಜ್ಜಿಗೆ ಸೇವಿಸಿದ್ದ ರಾಧಾಮ್ಮ ಪ್ರಜ್ಞೆ ಕಳೆದುಕೊಂಡು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಇಂದ್ರಾಳಿ ರೈಲ್ವೆ ನಿಲ್ದಾಣ ತಲುಪುತ್ತಿದ್ದಂತೆ ರೈಲ್ವೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ಇಬ್ಬರನ್ನೂ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

error: Content is protected !!
Scroll to Top