ಮರ್ಧಾಳ: ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಬಗ್ಗೆ ಮೋದಿ ಆ್ಯಪ್‍ನಲ್ಲಿ ದೂರು ► ಯುವಕನ ದೂರಿಗೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ

(ನ್ಯೂಸ್ ಕಡಬ) newskadaba.com ಕಡಬ, ಅ.08. ತನ್ನೂರಿನ ದುರ್ಬಲ ಮೊಬೈಲ್ ನೆಟ್‍ವರ್ಕ್ ಸಮಸ್ಯೆಯ ಕುರಿತು ಮೋದಿ ಆ್ಯಪ್‍ನಲ್ಲಿ ದೂರು ದಾಖಲಿಸಿದ್ದ ಕಡಬ ತಾಲೂಕಿನ ಐತ್ತೂರು ಗ್ರಾಮದ ಅಂತಿಬೆಟ್ಟು ನಿವಾಸಿ ಚೇತನ್ ಅವರ ದೂರಿಗೆ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಸ್ಪಂದಿಸಿ ಸಮಸ್ಯೆಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಆರು ದಿನಗಳ ಹಿಂದೆ ಮೋದಿ ಆ್ಯಪ್‍ನಲ್ಲಿ ದೂರು ದಾಖಲಿಸಿದ್ದ ಚೇತನ್ ಅವರು ತನ್ನ ಗ್ರಾಮವಾದ ಐತ್ತೂರಿನಲ್ಲಿ ಮೊಬೈಲ್ ನೆಟ್‍ವರ್ಕ್ ಹಾಗೂ ಇಂಟರ್ನೆಟ್ ಸೇವೆ ಸಮರ್ಪಕವಾಗಿ ಸಿಗದಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಹಳ್ಳಿಗಾಡು ಸೇರಿದಂತೆ ಗ್ರಾಮ ಗ್ರಾಮಗಳಲ್ಲಿ ದೂರ ಸಂಪರ್ಕ ವ್ಯವಸ್ಥೆ ಬಲಗೊಂಡರೆ ಮಾತ್ರ ಪ್ರಧಾನಿಯವರ ಡಿಜಿಟಲ್ ಇಂಡಿಯಾದ ಪರಿಕಲ್ಪನೆ ಸಾಕಾರಗೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಚೇತನ್ ಅವರ ದೂರಿಗೆ ಕೂಡಲೇ ಸ್ಪಂದಿಸಿರುವ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಬಿಎಸ್ಸೆನ್ನೆಲ್ ಅಧಿಕಾರಿಗಳಿಗೆ ಸೂಚನೆ ಕಳುಹಿಸಿದ್ದಾರೆ. ಅದರಂತೆ ಶನಿವಾರದಂದು ಚೇತನ್ ಅವರನ್ನು ಸಂಪರ್ಕಿಸಿದ ಬಿಎಸ್ಸೆನ್ನೆಲ್ ಮಂಗಳೂರು ಕಚೇರಿಯ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡು ಶೀಘ್ರದಲ್ಲಿ ಕಂಪೆನಿಯ ತಾಂತ್ರಿಕ ಅಧಿಕಾರಿಗಳು ಐತ್ತೂರಿಗೆ ಭೇಟಿ ನೀಡಿ ಅಗತ್ಯ ಸಮೀಕ್ಷೆ ನಡೆಸಲಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ಸಹಕಾರ ಅಗತ್ಯವಿದ್ದಲ್ಲಿ ಸಂಪರ್ಕಿಸುತ್ತೇವೆ ಎಂದು ಹೇಳಿದ್ದಾರೆ.

Also Read  ಪ್ರಧಾನಿ ಮೋದಿ ವಿರುದ್ದ ಆಕ್ಷೇಪಾರ್ಹ ಪೋಸ್ಟರ್      ➤ 6 ಮಂದಿ ಬಂಧನ, 100ಕ್ಕೂ FIR..!

ಈ ರೀತಿಯ ಕ್ಷಿಪ್ರ ಸ್ಪಂದನೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಕೇವಲ 4 ದಿನಗಳೊಳಗೆ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಬಿಎಸ್ಸೆನ್ನೆಲ್ ಮಂಗಳೂರು ಕಚೇರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರು ಕರೆ ಮಾಡಿ ವಿಚಾರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿರುವುದು ತುಂಬಾ ಖುಷಿ ಕೊಟ್ಟಿದೆ. ಪಂಚಾಯತ್ ಮಟ್ಟದಲ್ಲಿಯೂ ಸಾರ್ವಜನಿಕರ ದೂರಿಗೆ ಇಂತಹ ಸ್ಪಂದನೆ ಸಿಗುವುದು ಕಷ್ಟ ಎನ್ನುವ ಕಾಲಘಟ್ಟದಲ್ಲಿ ಪ್ರಧಾನ ಮಂತ್ರಿಯವರ ಕಚೇರಿಯಿಂದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮೊಬೈಲ್ ಕಂಪೆನಿಗಳಿಗೆ ಸೂಚನೆ ಹೋಗಿರುವುದು ಒಳ್ಳೆಯ ಬೆಳವಣಿಗೆ. ಭಾರತ ಬದಲಾಗುತ್ತಿದೆ ಎನ್ನುವುದಂತೂ ಸತ್ಯ. ಪ್ರಧಾನಿಯವರ ಕಳಕಳಿಯ ಕಾರ್ಯಗಳಲ್ಲಿ ನಾವು ಕೂಡ ಪೂರ್ಣ ಪ್ರಮಾಣದಲ್ಲಿ ಕೈಜೋಡಿಸುವುದು ಅಗತ್ಯ ಎಂದು ಚೇತನ್ ಅಂತಿಬೆಟ್ಟು ಪ್ರತಿಕ್ರಿಯಿಸಿದ್ದಾರೆ.

Also Read  ಹಳಿ ತಪ್ಪಿದ ಸಬರಮತಿ ಎಕ್ಸ್ ಪ್ರೆಸ್ ಪ್ಯಾಸೆಂಜರ್ ರೈಲಿನ 20 ಬೋಗಿಗಳು             ಪ್ರಯಾಣಿಕರ ಸ್ಥಳಾಂತರ                                                

error: Content is protected !!
Scroll to Top