(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.27. ಐಪಿಸಿ ಸೆಕ್ಷನ್ 497 ಅಸಂವಿಧಾನಿಕವಾಗಿದ್ದು, ಅನೈತಿಕ ಸಂಬಂಧವು ಕ್ರಿಮಿನಲ್ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಗುರುವಾರ ಮಹತ್ವದ ತೀರ್ಪು ನೀಡಿದೆ.
ಅನೈತಿಕ ಸಂಬಂಧಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 497ನ ಮಾನ್ಯತೆ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಸೆಕ್ಷನ್ 306 ಆತ್ಮಹತ್ಯೆಗೆ ಪ್ರಚೋದನೆಯ ವ್ಯಾಪ್ತಿಗೆ ಬಾರದ ಹೊರತು ಅನೈತಿಕ ಸಂಬಂಧ ಅಪರಾಧವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ. ಸೆಕ್ಷನ್ 497ರ ಅಡಿ ಪುರುಷನಿಗೆ ಮಾತ್ರವಲ್ಲ ಮಹಿಳೆಯರಿಗೂ ಶಿಕ್ಷೆಯಾಗಬೇಕು. ಗಂಡನು ಹೆಂಡತಿಗೆ ಮಾಲಕನಲ್ಲ. ಮಹಿಳೆಯರು – ಪುರುಷರನ್ನು ಸಮಾನವಾಗಿ ಕಾಣಬೇಕು ಎಂದು ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ನಾಲ್ವರು ನ್ಯಾಯಾಧೀಶರ ಪೀಠ ಅಭಿಪ್ರಾಯಪಟ್ಟಿದೆ. ಸಮಾಜದಲ್ಲಿ ವ್ಯಕ್ತಿಯ ಘನತೆ ಮುಖ್ಯವಾಗಿದ್ದು, ವ್ಯವಸ್ಥೆಯು ಮಹಿಳೆಯನ್ನು ಅಸಮಾನವಾಗಿ ಕಾಣಬಾರದು. ಸಮಾಜ ಇಚ್ಛಿಸಿದಂತೆ ಮಹಿಳೆ ಯೋಚಿಸಬೇಕು ಎಂದು ಹೇಳಲು ಸಾಧ್ಯವಿಲ್ಲ ಎಂದು ದೀಪಕ್ ಮಿಶ್ರಾ ಹೇಳಿದರು.