(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.07. ಇತ್ತೀಚೆಗೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕುಪ್ಪೆಟ್ಟಿ ನದಿಯಲ್ಲಿ ಗಂಡಸಿನ ಮೃತದೇಹ ಪತ್ತೆಯ ಜಾಡು ಹಿಡಿದ ಡಿಸಿಐಬಿ ಪೊಲೀಸರು ಘಟನೆಗೆ ಸಂಬಂಧಿಸಿ ಕುಖ್ಯಾತ ರೌಡಿಗಳಿಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಅಳುವ ಕೊಟ್ಟಕ್ಕಾಕಾತ್ ನಿವಾಸಿ ಕೆ.ಎ ಸಿದ್ದಿಕ್ ಎಂಬವರ ಪುತ್ರ ಔರಂಗಝೀಬ್ (37) ಹಾಗೂ ಪಾಲಕ್ಕಾಡು ಜಿಲ್ಲೆಯ ಆಲೆತ್ತೂರು ತಾಲೂಕಿನ ಕೊಕ್ರತ್ತಲ್ ನಿವಾಸಿ ಮೊಯ್ದೀನ್ ಕುಟ್ಟಿ ಎಂಬವರ ಪುತ್ರ ಮಹಮ್ಮದ್ ಶಮನಾಝ್(23) ಎಂದು ಗುರುತಿಸಲಾಗಿದೆ. ಆರೋಪಿಗಳು ಕೇರಳದ ಎರ್ನಾಕುಳಂ ಜಿಲ್ಲೆಯ ಕುನ್ನತ್ತನಾಡು ತಾಲೂಕಿನ ಅರೆಕ್ಕಿಪ್ಪಾಡಿ ನಿವಾಸಿ ಉನ್ನಿಕೃಷ್ಣನ್ ಎಂಬವರನ್ನು ಹೆಂಗಸಿನ ವಿಚಾರದಲ್ಲಿ ಕೊಲೆಗೈದು ಮೃತದೇಹವನ್ನು ಉಪ್ಪಿನಂಗಡಿಯ ಕುಪ್ಪೆಟ್ಟಿ ಸಮೀಪ ನದಿಗೆಸೆದಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆಯ ವೇಳೆ ಮೃತ ಶರೀರದಲ್ಲಿ ಗಾಯಗಳಾಗಿದ್ದರಿಂದ ಇದೊಂದು ವ್ಯವಸ್ಥಿತ ಕೊಲೆ ಎಂದು ಮೃತ ವ್ಯಕ್ತಿಯ ಸಹೋದರನ ಮಗ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ಪತ್ತೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ವಿಶೇಷ ತಂಡಗಳನ್ನು ರಚಿಸಿದ್ದು, ಪ್ರಕರಣದ ಪ್ರಮುಖ ಆರೋಪಿಗಳಿಬ್ಬರನ್ನು ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನಿಲ್ ವೈ ನಾಯ್ಕ್ ನೇತೃತ್ವದ ತಂಡವು ಕಾಸರಗೋಡುನಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಕೃತ್ಯಕ್ಕೆ ಬಳಸಿದ್ದ ಕೊಲೆಯಾದ ವ್ಯಕ್ತಿಯ ಇನೋವಾ ಕಾರನ್ನು ಕಾಸರಗೋಡಿನ ಬಸ್ಸು ನಿಲ್ದಾಣದ ಬಳಿಯಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆ ಬಗ್ಗೆ ಕಾರ್ಯಾಚರಣೆ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|ರವಿಕಾಂತೇಗೌಡ ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಜಿತ್ ವಿ.ಜೆ. ರವರ ನಿರ್ದೇಶನದಂತೆ ಡಿ.ಸಿ.ಐ.ಬಿ. ಪೊಲೀಸ್ ನಿರೀಕ್ಷಕರಾದ ಸುನೀಲ್ ವೈ ನಾಯಕ್ ರವರ ನೇತ್ರತ್ವದ ತಂಡದಲ್ಲಿ ಸಿಬ್ಬಂದಿಯವರಾದ ನಾರಾಯಣ,ವಾಸು ನಾಯ್ಕ, ಲಕ್ಷ್ಮಣ ಕೆ.ಜಿ., ಇಕ್ಬಾಲ್ ಎ.ಇ., ಉದಯ ರೈ, ಪ್ರವೀಣ್ ಎಂ., ತಾರಾನಾಥ್ ,ಉದಯ ಗೌಡ, ಪ್ರವೀಣ ರೈ ಮತ್ತು ಸುರೇಶ್ ಪೂಜಾರಿಯವರು ಭಾಗವಹಿಸಿದ್ದರು. ತಂಡಕ್ಕೆ ಪೊಲೀಸ್ ಅಧೀಕ್ಷಕರು ಬಹುಮಾನವನ್ನು ಘೋಷಿಸಿದ್ದಾರೆ.