ಬದುಕಿದ್ದವರನ್ನು ಸತ್ತಿದ್ದಾರೆಂದು ಹೇಳಿ ವಿವಾದ ಸೃಷ್ಟಿಸಿದ ಸಂಸದೆ ► ಕೇಂದ್ರಕ್ಕೆ ಶೋಭಾ ಕರಂದ್ಲಾಜೆ ಬರೆದಿರುವ ಪತ್ರದಲ್ಲಿ ಯಡವಟ್ಟು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.19. ರಾಜ್ಯದಲ್ಲಿ ಕೋಮು ಗಲಭೆಯನ್ನು ಪ್ರಸ್ತಾಪಿಸುವ ಭರದಲ್ಲಿ ಬಿಜೆಪಿ ಸಂಸದೆ ಯಡವಟ್ಟು ಮಾಡಿಕೊಂಡಿದ್ದಾರೆ. ಕೇಂದ್ರವನ್ನು ಓಲೈಸುವ ಭರದಲ್ಲಿಯೋ ಅಥವಾ ಕಾಂಗ್ರೆಸ್ ಸರಕಾರವನ್ನು ಹಣಿಯುವ ಭರದಲ್ಲೋ ಯಾವುದೇ ಪರಿಶೀಲನೆ ಮಾಡದೆ ಅನೌಪಚಾರಿಕವಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್’ಗೆ ಬರೆದ ಪತ್ರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಯಡವಟ್ಟು ಸ್ಪಷ್ಟವಾಗಿ ಕಂಡು ಬಂದಿದೆ. ಬಿಜೆಪಿಯ ಈ ಯಡವಟ್ಟು ಮತ್ತಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಸಂಸದೆ ಶೋಭಾ ಕರಂದ್ಲಾಜೆ ಬರೆದ ಪತ್ರದಲ್ಲಿ ಬದುಕಿದ್ದವರನ್ನೂ ಕೊಲೆಯಾದವರ ಪಟ್ಟಿಯಲ್ಲಿ  ಸೇರಿಸಿದ್ದಾರೆ. ಅಲ್ಲದೆ ಬೇರೆ ಬೇರೆ ಕಾರಣದಿಂದ ಸತ್ತವರನ್ನೂ ಕೋಮು ಗಲಭೆಯ ಪಟ್ಟಿಗೆ ಸೇರಿಸಿದ್ದಾರೆ. ಪತ್ರದಲ್ಲಿ ಹಲ್ಲೆಯಾದವರ, ವೈಯುಕ್ತಿಕ ಸಂಘರ್ಷದಿಂದಾಗಿ ಬಲಿಯಾದವರು, ರಸ್ತೆಯಲ್ಲಿ ಕಂಠ ಪೂರ್ತಿ ಕುಡಿದು ಅಪಘಾತದಲ್ಲಿ ಮೃತಪಟ್ಟವರ ಹೆಸರನ್ನೂ ‘ಕೋಮು ಗಲಭೆ’ಯಲ್ಲಿ ಸತ್ತಿದ್ದಾರೆ ಎಂದು ತಮ್ಮ ಪತ್ರದ ಮೂಲಕ ಶೋಭಾ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಸಂಸದೆ ಶೋಭಾ ಕರಂದ್ಲಾಜೆ ಹೀಗೆ ಮಾಡಿರುವ ಹಿಂದಿರುವ ಉದ್ದೇಶವೇನು ಎಂಬ ಪ್ರಶ್ನೆಯನ್ನು ಎತ್ತಿದೆ. ಇನ್ನು ಈ ಕುರಿತಾಗಿ ಪ್ರತಿಕ್ರಿಸಿರುವ ಸಂಸದೆ ಶೋಭಾ ಇದು ಕೈ ತಪ್ಪಿನಿಂದಾದ ಯಡವಟ್ಟು ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಇನ್ನು ಮೃತಪಡದ ವ್ಯಕ್ತಿಯನ್ನೂ ಸತ್ತಿದ್ದಾರೆ ಎಂದು ಬಿಂಬಿಸುವುದು ಅತ್ಯಂತ ಅಮಾನವೀಯ ಕೆಲಸ. ಇನ್ನು ಜವಾಬದಾರಿಯುತ ಸ್ಥಾನದಲ್ಲಿರುವ ಸಂಸದೆಯೊಬ್ಬರು ಕೇಂದ್ರದ ಗೃಹಸಚಿವರಿಗೆ ಬರೆದ ಪತ್ರದಲ್ಲಿ ಇಂತಹ ಯಡವಟ್ಟು ಮಾಡಿರುವುದು ನಿಜಕ್ಕೂ ದೊಡ್ಡ ತಪ್ಪು ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ.

Also Read  ಏಷ್ಯನ್ ಎಮರ್ಜಿಂಗ್ ಕ್ರಿಕೆಟ್ ಟೂರ್ನಿ ➤ ಫೈನಲ್ ಪ್ರವೇಶಿಸಿದ ಭಾರತದ ಮಹಿಳಾ ತಂಡ

ಕೃಪೆ: ಸುವರ್ಣ ನ್ಯೂಸ್

error: Content is protected !!
Scroll to Top