ಮುಂಬೈ, ಜು.18. ಐಟಿಸಿ ಷೇರುಗಳ ಮೇಲೆ ಅವಲಂಬಿತವಾಗಿದ್ದ ಜೀವ ವಿಮಾ ನಿಗಮ (ಎಲ್ಐಸಿ) ಸಂಸ್ಥೆಯು ಮಂಗಳವಾರ ಮಧ್ಯಾಹ್ನದ ವೇಳೆಗೆ ಭಾರಿ ನಷ್ಟ ಅನುಭವಿಸಿದ್ದು, ಷೇರುಪೇಟೆಯಲ್ಲಿ ಅರ್ಧ ಗಂಟೆಯಲ್ಲಿ 7,000 ಕೋಟಿ ರೂ. ಕಳೆದುಕೊಂಡಿದೆ.
ಐಟಿಸಿ ಷೇರುಗಳು ಬೆಳಗ್ಗಿನ ವಹಿವಾಟಿನಲ್ಲಿ ಶೇ 15ರಷ್ಟು ಕುಸಿತ ಕಂಡಿದ್ದು, ಎಲ್ಐಸಿಗೆ ಮಾರಕವಾಗಿ ಪರಿಣಮಿಸಿದೆ. ಜೂನ್ 30, 2017ರಂತೆ ಸಿಗರೇಟ್ ತಯಾರಕ ಸಂಸ್ಥೆಯಲ್ಲಿ ಶೇ 16.29ರಷ್ಟು ಪಾಲನ್ನು ಎಲ್ಐಸಿ ಹೊಂದಿದೆ. 1992ರ ನಂತರ ಇದೇ ಮೊದಲ ಬಾರಿಗೆ ಐಟಿಸಿ ಈ ಪ್ರಮಾಣದಲ್ಲಿ ಕುಸಿತ ಕಂಡಿದೆ. ಐಟಿಸಿಯಲ್ಲಿ ಹೂಡಿಕೆ ಮಾಡುತ್ತಿರುವ ಎಲ್ಐಸಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಬಾಂಬೆ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕಳೆದ ಏಪ್ರಿಲ್ ನಲ್ಲೇ ಹಾಕಲಾಗಿದೆ. ಎಲ್ಐಸಿ ಸೇರಿದಂತೆ ನಾಲ್ಕು ಸರ್ಕಾರಿ ಸ್ವಾಮ್ಯದ ಜೀವ ವಿಮಾ ಸಂಸ್ಥೆಗಳು ಸಿಗರೇಟು ತಯಾರಕ ಸಂಸ್ಥೆ ಐಟಿಸಿ ಮೇಲೆ ಹೂಡಿಕೆ ಮಾಡಿರುವುದನ್ನು ವಿರೋಧಿಸಲಾಗಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಘೋಷಣೆ ನಂತರ ಮಂಗಳವಾರದಂದು ಐಟಿಸಿ ಷೇರುಗಳು ಶೇ. 15 ರಷ್ಟು ಕುಸಿತ ಕಂಡಿದೆ. ಬಿಎಸ್ಇ ನಲ್ಲಿ 276 ರೂ.ಗೆ ಕುಸಿದಿದ್ದು, ಮಾರುಕಟ್ಟೆ ಮೌಲ್ಯ 45,000 ಕೋಟಿ ರೂ. ರಷ್ಟಿದೆ.
ಕೃಪೆ: ಒನ್ ಇಂಡಿಯಾ