ಕುಂದಾಪುರ: ಬಳ್ಕೂರು ಟಿಪ್ಪರ್-ಸ್ಕೂಟರ್ ಅಪಘಾತ

ಗಾಯಗೊಂಡಿದ್ದ ಕಾಲೇಜು ವಿದ್ಯಾರ್ಥಿ ಮೃತ್ಯು

(ನ್ಯೂಸ್‌ ಕಡಬ) newskadaba.com,   ನ . 03 .ಅಕ್ಟೋಬರ್ 30 ರಂದು ಬಳ್ಕೂರಿನಲ್ಲಿ ನಡೆದ ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ನಡುವಿನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಟಿ.ಕೆ. ಮೊಹಮ್ಮದ್ ಶಾಯನ್, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 2 ರ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಂಡ್ಲೂರು ನಿವಾಸಿಯಾಗಿರುವ ಶಾಯನ್ ಅವರನ್ನು ಅಪಘಾತದ ನಂತರ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಕೂಟರ್‌ನ ಹಿಂಬದಿ ಕುಳಿತಿದ್ದ ಮತ್ತೊಬ್ಬ ವಿದ್ಯಾರ್ಥಿ ಮೊಹಮ್ಮದ್ ರಾಯನ್ ಕೂಡ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ರಾಜ್ಯ ಹೆದ್ದಾರಿ 52 ರಲ್ಲಿ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 30 ರಂದು ಈ ಅಪಘಾತ ಸಂಭವಿಸಿತ್ತು.

ಮಣ್ಣು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳು ಕುಂದಾಪುರ ಕಡೆಯಿಂದ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದವು. ಮುಂದೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಿಂದಾಗಿ ಮುಂದಿನ ಟಿಪ್ಪರ್ ಚಾಲಕ ವೇಗ ತಗ್ಗಿಸಿದಾಗ, ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಅದಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಳಿಕ ಎರಡನೇ ಟಿಪ್ಪರ್ ಚಾಲಕ ವಾಹನವನ್ನು ರಸ್ತೆಯ ತೀರಾ ಬಲಬದಿಗೆ ತಿರುಗಿಸಿದ ಪರಿಣಾಮ, ಕಂಡ್ಲೂರು ಕಡೆಯಿಂದ ಬಸ್ರೂರು ಕಡೆಗೆ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಇಬ್ಬರೂ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಪಘಾತಕ್ಕೊಳಗಾದ ಟಿಪ್ಪರ್ ಅಗತ್ಯ ಪರವಾನಗಿ ಇಲ್ಲದೆ ಮಣ್ಣು ಸಾಗಿಸುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಕುಂದಾಪುರ ಗ್ರಾಮಾಂತರ ಪೊಲೀಸರು ಅಪರಾಧ ಸಂಖ್ಯೆ 61/2026 ರಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 110, 303(2) ಮತ್ತು 238 ಜೊತೆಗೆ 3(5), ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್ 4(1)(ಎ) ಮತ್ತು 21(4), ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 134(ಎ) ಮತ್ತು (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತ ಹಾಗೂ ಅಕ್ರಮ ಮಣ್ಣು ಸಾಗಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಟಿಪ್ಪರ್ ಚಾಲಕರಾದ ನಾಗರಾಜ್ ಮತ್ತು ಋತ್ವಿಜ್ ಹಾಗೂ ಮಣ್ಣು ತೆಗೆದ ಜಾಗದ ಮಾಲೀಕ ಅಜಿತ್ ಶೆಟ್ಟಿ ಎಂಬುವವರನ್ನು ಬಂಧಿಸಿದ್ದಾರೆ

Scroll to Top