ಮಧ್ಯರಾತ್ರಿ ಸಮುದ್ರದಲ್ಲಿ ಬಿದ್ದ ಮೀನುಗಾರ: ಭಾರತೀಯ ಕೋಸ್ಟ್ ಗಾರ್ಡ್‌ನಿಂದ ಯಶಸ್ವಿ ಕಾರ್ಯಾಚರಣೆ!

(ನ್ಯೂಸ್‌ ಕಡಬ) newskadaba.com, ನ. 02. ಮಧ್ಯರಾತ್ರಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರಕ್ಕೆ ಬಿದ್ದ ಮೀನುಗಾರನನ್ನು ಭಾರತೀಯ ಕೋಸ್ಟ್ ಗಾರ್ಡ್ (ಕರಾವಳಿ ಕಾವಲು ಪಡೆ) ಮಿಂಚಿನ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ.ಭಾನುವಾರ ಮಧ್ಯರಾತ್ರಿ ಮಂಗಳೂರಿನಿಂದ ಸುಮಾರು 54 ನಾಟಿಕಲ್ ಮೈಲಿ (100 ಕಿ.ಮೀ) ದೂರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ‘ಐಎಫ್‌ಬಿ ಶಿವ ಸಾಗರ್’ ಎಂಬ ಮೀನುಗಾರಿಕಾ ದೋಣಿಯಿಂದ ವಿಹೆಚ್‌ಎಫ್ ಮೂಲಕ ತುರ್ತು ಕರೆ ಬಂದಿತ್ತು.

ಬಲೆ ಎಳೆಯುವ ಸಂದರ್ಭದಲ್ಲಿ ಮೀನುಗಾರನೊಬ್ಬ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದನು. ದೋಣಿಯಲ್ಲಿದ್ದ ಇತರ ಸಿಬ್ಬಂದಿ ಆತನನ್ನು ತಕ್ಷಣವೇ ನೀರಿನಿಂದ ಮೇಲೆತ್ತಿದ್ದರೂ, ಆತನಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿತ್ತು. ತುರ್ತು ಕರೆ ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ಭಾರತೀಯ ಕೋಸ್ಟ್ ಗಾರ್ಡ್ ಜಿಲ್ಲಾ ಪ್ರಧಾನ ಕಚೇರಿ-೩, ರಕ್ಷಣಾ ಕಾರ್ಯಾಚರಣೆಗಾಗಿ ‘ಐಸಿಜಿಎಸ್ ಸಿ-೪೪೮’ ಹಡಗನ್ನು ನಿಯೋಜಿಸಿತು. ದಟ್ಟ ಕತ್ತಲೆಯ ನಡುವೆಯೂ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಮೀನುಗಾರಿಕಾ ದೋಣಿಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದರು.

ಸಂತ್ರಸ್ತ ಮೀನುಗಾರನನ್ನು ಸುರಕ್ಷಿತವಾಗಿ ರಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ನವಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ) ಜೆಟ್ಟಿಗೆ ಕರೆತರಲಾಯಿತು. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ..

Scroll to Top