ಗೂಗಲ್ ಮ್ಯಾಪ್ ನಂಬಿ ದಟ್ಟ ಕಾಡಿನಲ್ಲಿ ಸಿಲುಕಿದ 9 ಟೆಕ್ಕಿಗಳು: ಕಂದಕಕ್ಕೆ ಉರುಳಿದ ಕಾರು, ಇಡೀ ರಾತ್ರಿ ಆತಂಕದ ಕಡಲು!

(ನ್ಯೂಸ್‌ ಕಡಬ) newskadaba.com, ನ. 03  .ಗೂಗಲ್ ಮ್ಯಾಪ್ ತೋರಿಸುವ ದಾರಿಯನ್ನೇ ಸಂಪೂರ್ಣವಾಗಿ ನಂಬಿ ಪ್ರಯಾಣಿಸುವವರಿಗೆ ಎಚ್ಚರಿಕೆಯ ಪಾಠವೊಂದಿದೆ. ಶಾರ್ಟ್‌ಕಟ್ ಹುಡುಕಲು ಹೋಗಿ ದಟ್ಟ ಅರಣ್ಯದೊಳಗೆ ಸಿಲುಕಿಕೊಂಡ ಒಂಬತ್ತು ಮಂದಿ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಇಡೀ ರಾತ್ರಿ ಜೀವ ಕೈಯಲ್ಲಿ ಹಿಡಿದುಕೊಂಡು ಕಾಲ ಕಳೆದ ಘಟನೆ ಚಾಮರಾಜನಗರ ಜಿಲ್ಲೆಯ ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಮೈಸೂರಿನ ದಸರಾ ದೀಪಾಲಂಕಾರದ ವೈಭವವನ್ನು ವೀಕ್ಷಿಸಿ ಬೆಂಗಳೂರಿನಿಂದ ತಮಿಳುನಾಡಿನ ಚೆನ್ನೈಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂಬತ್ತು ಮಂದಿ ಟೆಕ್ಕಿಗಳು ಈ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಯಾಣದ ವೇಳೆ ಗೂಗಲ್ ಮ್ಯಾಪ್ ನೆರವು ಪಡೆದಿದ್ದ ಅವರು, ಅದು ತೋರಿಸಿದ ಕಡಿಮೆ ದೂರದ ಶಾರ್ಟ್‌ಕಟ್ ರಸ್ತೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಆ ದಾರಿ ಅವರನ್ನು ಗಮ್ಯಸ್ಥಾನಕ್ಕೆ ಕರೆದೊಯ್ಯುವ ಬದಲು ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ಆಸನೂರು ದಟ್ಟ ಅರಣ್ಯದೊಳಗೆ ತಲುಪಿಸಿದೆ.

ಕಾಡಿನೊಳಗಿನ ಕಿರಿದಾದ, ಕಲ್ಲು-ಮುಳ್ಳುಗಳಿಂದ ಕೂಡಿದ್ದ ರಸ್ತೆಯಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಆಳವಾದ ಕಂದಕಕ್ಕೆ ಉರುಳಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಒಂಬತ್ತು ಮಂದಿಗೂ ಯಾವುದೇ ಗಂಭೀರ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಮೊಬೈಲ್ ನೆಟ್‌ವರ್ಕ್ ಕೈಕೊಟ್ಟಿದೆ. ಸುತ್ತಲೂ ದಟ್ಟ ಅರಣ್ಯ, ಹೊರಬರಲು ದಾರಿ ತಿಳಿಯದ ಪರಿಸ್ಥಿತಿ. ಈ ಪ್ರದೇಶದಲ್ಲಿ ಕಾಡಾನೆಗಳು ಹಾಗೂ ಚಿರತೆಗಳ ಓಡಾಟವಿರುವುದರಿಂದ ಹೊರಗೆ ಹೋಗಲು ಯುವಕರು ಭಯಪಟ್ಟಿದ್ದಾರೆ. ಹೀಗಾಗಿ ಕಾರಿನ ಲೈಟ್‌ಗಳನ್ನು ಆರಿಸಿ, ವನ್ಯಜೀವಿಗಳ ದಾಳಿಯ ಆತಂಕದ ನಡುವೆ ಇಡೀ ರಾತ್ರಿ ಕಾರಿನೊಳಗೇ ಉಳಿದುಕೊಂಡಿದ್ದಾರೆ.

ಮರುದಿನ ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ತಂಡದಲ್ಲಿದ್ದ ಯುವಕನೊಬ್ಬ ಧೈರ್ಯ ಮಾಡಿ ಸ್ವಲ್ಪ ದೂರ ನಡೆದು ಮೊಬೈಲ್ ಸಿಗ್ನಲ್ ಹುಡುಕಿದ್ದಾನೆ. ನೆಟ್‌ವರ್ಕ್ ಲಭ್ಯವಾದ ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಘಟನೆಯ ಮಾಹಿತಿ ನೀಡಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕ್ರೇನ್ ಸಹಾಯದಿಂದ ಕಂದಕಕ್ಕೆ ಬಿದ್ದಿದ್ದ ಕಾರನ್ನು ಮೇಲಕ್ಕೆತ್ತಿ, ಅದರಲ್ಲಿದ್ದ ಒಂಬತ್ತು ಮಂದಿಯನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಈ ಘಟನೆ ಅಪರಿಚಿತ ರಸ್ತೆಗಳಲ್ಲಿ ಪ್ರಯಾಣಿಸುವಾಗ ನ್ಯಾವಿಗೇಷನ್ ಆ್ಯಪ್‌ಗಳನ್ನು ಅತಿಯಾಗಿ ಅವಲಂಬಿಸುವ ಅಪಾಯವನ್ನು ಮತ್ತೊಮ್ಮೆ ನೆನಪಿಸಿದೆ. ಈ ಹಿಂದೆಯೂ ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಗೂಗಲ್ ಮ್ಯಾಪ್ ತೋರಿಸಿದ ಮಾರ್ಗವನ್ನು ಅನುಸರಿಸಿ ವಾಹನಗಳು ಅಪಾಯಕಾರಿ ಸ್ಥಳಗಳಿಗೆ ತೆರಳಿದ ಘಟನೆಗಳು ವರದಿಯಾಗಿವೆ.

ವಿಶೇಷವಾಗಿ ಅರಣ್ಯ ಪ್ರದೇಶ, ಕಿರಿದಾದ ಗ್ರಾಮೀಣ ರಸ್ತೆಗಳು ಹಾಗೂ ಅಪರಿಚಿತ ಮಾರ್ಗಗಳಲ್ಲಿ ಪ್ರಯಾಣಿಸುವಾಗ ಮ್ಯಾಪ್ ಸೂಚನೆಗಳನ್ನು ಮಾತ್ರ ನಂಬದೆ ಸ್ಥಳೀಯರ ಸಲಹೆ ಪಡೆಯುವುದು, ರಸ್ತೆ ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯ. ಕೆಲವೊಮ್ಮೆ ಕೆಲವು ಕಿಲೋಮೀಟರ್ ಉಳಿಸುವ ಶಾರ್ಟ್‌ಕಟ್, ಜೀವಕ್ಕೇ ಅಪಾಯ ತಂದೊಡ್ಡಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

Scroll to Top