
(ನ್ಯೂಸ್ ಕಡಬ) newskadaba.com, ನ. 02. ಮಂಗಳೂರು ರೈಲ್ವೆ ವಲಯವನ್ನು ಮೈಸೂರು ವಿಭಾಗಕ್ಕೆ ಸೇರಿಸಿದ ನಂತರ ಪ್ರಕಟವಾಗಿರುವ ಹೊಸ ರೈಲು ವೇಳಾಪಟ್ಟಿ ಕರಾವಳಿ ಭಾಗದ ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಗೋಮಟೇಶ್ವರ ಎಕ್ಸ್ಪ್ರೆಸ್ (16576/16540) ಇನ್ನುಮುಂದೆ ಬೆಳಗ್ಗೆ 7 ಗಂಟೆಯ ಬದಲಿಗೆ ಬೆಳಗ್ಗೆ 11:40 ಕ್ಕೆ ಹೊರಡಲಿದೆ. ಯಶವಂತಪುರ ತಲುಪುವ ಸಮಯ ಸಂಜೆ 4:30ರಿಂದ ರಾತ್ರಿ 10:15 ಕ್ಕೆ ಬದಲಾಗಿದೆ.ಯಶವಂತಪುರ-ಮಂಗಳೂರು ಎಕ್ಸ್ಪ್ರೆಸ್ (16575/16539) ಮಂಗಳೂರು ಜಂಕ್ಷನ್ ತಲುಪುವ ಸಮಯ ಸಂಜೆ 4:40ರಿಂದ ಸಂಜೆ 5:10 ಕ್ಕೆ ಬದಲಾಗಿದೆ.
ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ (16515) ಕಾರವಾರ ತಲುಪುವ ಸಮಯ ರಾತ್ರಿ 10:45ರಿಂದ ರಾತ್ರಿ 11:30 ಕ್ಕೆ ನಿಗದಿಯಾಗಿದೆ.ಕಾರವಾರ-ಯಶವಂತಪುರ ಎಕ್ಸ್ಪ್ರೆಸ್ (16516) ಯಶವಂತಪುರ ತಲುಪುವ ಸಮಯ ರಾತ್ರಿ 8:50ರಿಂದ ರಾತ್ರಿ 10:15 ಕ್ಕೆ ಬದಲಾಗಿದೆ.
ರಾತ್ರಿ ತಡವಾಗಿ ಬೆಂಗಳೂರು ತಲುಪುವುದರಿಂದ ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದೆ ಪ್ರಯಾಣಿಕರಿಗೆ ಹೆಚ್ಚಿನ ಆರ್ಥಿಕ ಹೊರೆ ಹಾಗೂ ತೊಂದರೆಯಾಗಲಿದೆ.ದುಬಾರಿ ವಂದೇ ಭಾರತ್ ರೈಲುಗಳ ಸೇವೆ ಆರಂಭವಾಗುತ್ತಿರುವ ಬೆನ್ನಲ್ಲೇ, ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಆಸರೆಯಾಗಿದ್ದ ಹಗಲು ವೇಳೆಯ ರೈಲುಗಳ ಸಮಯ ಬದಲಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸಾರ್ವಜನಿಕರ ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ನೈಋತ್ಯ ರೈಲ್ವೆ ಈ ಹೊಸ ಪರಿಷ್ಕರಣೆಯನ್ನು ಹಿಂಪಡೆದು, ಹಳೆಯ ವೇಳಾಪಟ್ಟಿಯನ್ನೇ ಮುಂದುವರಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.




