
(ನ್ಯೂಸ್ ಕಡಬ) newskadaba.com, ಅ .31. 2016ರಲ್ಲಿ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಸರಣಿ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮುಂಬೈ ಮೂಲದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಹಾರಾಷ್ಟ್ರದ ಥಾಣೆ ನಿವಾಸಿ ವಿಶಾಲ್ ಪೊಂಕೆ (30) ಬಂಧಿತ ಆರೋಪಿ. ಅಕ್ಟೋಬರ್ 30ರಂದು ಪುತ್ತೂರಿನ 2ನೇ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ವಕೀಲರೊಂದಿಗೆ ಹಾಜರಾಗಿ, ತನ್ನ ವಿರುದ್ಧದ ಬಂಧನ ವಾರಂಟ್ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದನು. ಆದರೆ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
2016ರಲ್ಲಿ ಕಡಬ ವ್ಯಾಪ್ತಿಯಲ್ಲಿ ನಡೆದ ನಾಲ್ಕು ಮನೆಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳಿಗೆ ಈಗಾಗಲೇ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ವಿಶಾಲ್ ಪೊಂಕೆ ಐದು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಆತನ ವಿರುದ್ಧ ಹಲವು ಬಾರಿ ಬಂಧನ ವಾರಂಟ್ ಹೊರಡಿಸಲಾಗಿತ್ತು. ಬಳಿಕ ಕಡಬ ಪೊಲೀಸರು ಮುಂಬೈಗೆ ತೆರಳಿ ನ್ಯಾಯಾಲಯದ ಪ್ರಕಟಣೆಯನ್ನು ಜಾರಿಗೊಳಿಸಿದ್ದರು. ಆಸ್ತಿ ಮುಟ್ಟುಗೋಲು ಪ್ರಕ್ರಿಯೆಯೂ ನಡೆಯುತ್ತಿತ್ತು. ಇದೀಗ ನ್ಯಾಯಾಲಯಕ್ಕೆ ಹಾಜರಾದ ಆರೋಪಿಯ ವಾರಂಟ್ ರದ್ದತಿ ಅರ್ಜಿ ತಿರಸ್ಕೃತಗೊಂಡಿದ್ದು, ಜೈಲು ಸೇರಿದ್ದಾನೆ.
ಇದಲ್ಲದೆ, ವಿಶಾಲ್ ಪೊಂಕೆ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ 2016ರ ಮತ್ತೊಂದು ಕಳವು ಪ್ರಕರಣ ಬಾಕಿಯಿದ್ದು, ನವೆಂಬರ್ 3ರಂದು ವಿಚಾರಣೆ ನಿಗದಿಯಾಗಿದೆ.




