
(ನ್ಯೂಸ್ ಕಡಬ) newskadaba.com, ಅ .31. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಸ್ಕೂಟರ್ಗೆ ಡಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ ಸಂಭವಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಟಿಪ್ಪರ್ ಲಾರಿ ಚಾಲಕರಾದ ನಾಗರಾಜ್ ಮತ್ತು ಋತ್ವಿಜ್ ಹಾಗೂ ಮಣ್ಣು ತೆಗೆಯಲಾದ ಜಾಗದ ಮಾಲೀಕ ಅಜಿತ್ ಶೆಟ್ಟಿ ಎಂದು ಗುರುತಿಸಲಾಗಿದೆ.ಈ ಅಪಘಾತವು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿ 52ರ ಬಳ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಬೆಳಗಿನ ಜಾವ ನಡೆದಿದೆ. ಕುಂದಾಪುರ ಕಡೆಯಿಂದ ಮಣ್ಣು ತುಂಬಿಕೊಂಡು ಬಂದ ಎರಡು ಟಿಪ್ಪರ್ ಲಾರಿಗಳನ್ನು ಚಾಲಕರು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬರುತ್ತಿದ್ದರೆನ್ನಲಾಗಿದೆ.
ಮುಂದೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ನಿಂದಾಗಿ ಮುಂದೆ ಇದ್ದ ಟಿಪ್ಪರ್ ಚಾಲಕ ವಾಹನದ ವೇಗವನ್ನು ಕಡಿಮೆ ಮಾಡಿದಾಗ, ಹಿಂದಿನಿಂದ ಅತಿವೇಗವಾಗಿ ಬಂದ ಮತ್ತೊಂದು ಟಿಪ್ಪರ್ ಅದಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಚಾಲಕ ಟಿಪ್ಪರ್ ಅನ್ನು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿದ್ದರಿಂದ, ಕಂಡ್ಲೂರ್ನಿಂದ ಬಸ್ರೂರು ಕಡೆಗೆ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಸ್ಕೂಟರ್ಗೆ ಟಿಪ್ಪರ್ ನೇರವಾಗಿ ಡಿಕ್ಕಿಯಾಗಿದೆ.ಅಪಘಾತದಲ್ಲಿ ಸ್ಕೂಟರ್ ಸವಾರರಾದ ಟಿ. ಕೆ. ಮೊಹಮ್ಮದ್ ಶಯಾನ್ ಮತ್ತು ಮೊಹಮ್ಮದ್ ರಯಾನ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೀಡಾದ ಟಿಪ್ಪರ್ ಲಾರಿಯಲ್ಲಿ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಮಣ್ಣು ಸಾಗಿಸಲಾಗುತ್ತಿತ್ತು. ಈ ಘಟನೆ ಹಾಗೂ ಅಕ್ರಮ ಮಣ್ಣು ಸಾಗಾಟಕ್ಕೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 110, 303(2), 238 ಮತ್ತು 3(5), ಗಣಿ ಮತ್ತು ಖನಿಜ ಅಭಿವೃದ್ಧಿ ಹಾಗೂ ನಿಯಂತ್ರಣ ಕಾಯ್ದೆ (MMRD Act) ಸೆಕ್ಷನ್ 4(1)(A), 21(4) ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆ (IMV Act) ಸೆಕ್ಷನ್ 134(a) ಮತ್ತು (b) ಅಡಿಯಲ್ಲಿ ಅಪರಾಧ ಸಂಖ್ಯೆ 61/2026 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ.




