
(ನ್ಯೂಸ್ ಕಡಬ) newskadaba.com, ಅ .31. ಮಂಗಳೂರು ಕರಾವಳಿಯ ಹಲವು ಕಡಲತೀರಗಳಲ್ಲಿ ರಾತ್ರಿಯ ವೇಳೆ ಸಮುದ್ರದ ಅಲೆಗಳು ಗಾಢ ನೀಲಿ ಬಣ್ಣದಲ್ಲಿ ಕಂಗೊಳಿಸುವ ಅಪರೂಪದ ನೈಸರ್ಗಿಕ ವಿಸ್ಮಯ ಕಂಡುಬಂದಿದೆ.
ಈ ವಿದ್ಯಮಾನವು ಯಾವುದೇ ರಾಸಾಯನಿಕ ಮಾಲಿನ್ಯದಿಂದ ಸಂಭವಿಸಿದ್ದಲ್ಲ, ಬದಲಿಗೆ ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಸಮುದ್ರದಲ್ಲಿ ಕಂಡುಬರುವ ‘ಡೈನೋಫ್ಲಾಜೆಲ್ಲೇಟ್ಸ್’ ವಿಭಾಗಕ್ಕೆ ಸೇರಿದ ‘ನೊಕ್ಟಿಲುಕಾ ಸಿಂಟಿಲನ್ಸ್’ ಎಂಬ ಸೂಕ್ಷ್ಮ ಸಮುದ್ರ ಜೀವಿಯಿಂದ ಈ ನೀಲಿ ಬೆಳಕು ಹೊರಹೊಮ್ಮುತ್ತದೆ.
ಈ ಜೀವಿಯಲ್ಲಿರುವ ‘ಲೂಸಿಫೆರಿನ್’ ಮತ್ತು ‘ಲೂಸಿಫೆರೇಸ್’ ಎಂಬ ರಾಸಾಯನಿಕಗಳು ಆಮ್ಲಜನಕದೊಂದಿಗೆ ವರ್ತಿಸಿದಾಗ ಬೆಳಕನ್ನು ಹೊರಸೂಸುತ್ತವೆ. ಈ ವಿದ್ಯಮಾನವನ್ನು ‘ಬಯೋಲ್ಯುಮಿನೆಸೆನ್ಸ್’ ಅಥವಾ ‘ಸೀ ಸ್ಪಾರ್ಕಲ್’ ಎಂದು ಕರೆಯಲಾಗುತ್ತದೆ.ಮಳೆಗಾಲದ ನಂತರ ಸಮುದ್ರಕ್ಕೆ ಹೆಚ್ಚಿನ ಪೋಷಕಾಂಶಗಳು ಸೇರುವುದರಿಂದ ಈ ಸೂಕ್ಷ್ಮಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ಪರಿಣಾಮ ಕರಾವಳಿಯುದ್ದಕ್ಕೂ ಈ ರೀತಿಯ ಮನಮೋಹಕ ನೀಲಿ ಬೆಳಕು ಕಂಗೊಳಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.




