
(ನ್ಯೂಸ್ ಕಡಬ) newskadaba.com, ಅ.02 . ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನದಲ್ಲಿ ಸಹ-ಪೈಲಟ್ ನಡೆಸಿದ ದಾಳಿಯ ಯತ್ನವನ್ನು ವಿಫಲಗೊಳಿಸಿ 180 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತದ ಧೈರ್ಯಶಾಲಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ.
ಸಂಕಷ್ಟದ ಸಮಯದಲ್ಲಿ ತೋರಿದ ಸಮಯಪ್ರಜ್ಞೆ ಹಾಗೂ ಅನುಭವದ ವಿವರಗಳನ್ನು ಕ್ಯಾಪ್ಟನ್ ಮಚ್ಚಾರ್ ಪ್ರಧಾನಿ ಜೊತೆ ಹಂಚಿಕೊಂಡಿದ್ದು, ಪ್ರಧಾನಿಯವರು ಅವರ ಸಾಹಸ ಮತ್ತು ಧೈರ್ಯವನ್ನು ಶ್ಲಾಘಿಸಿ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡಿರುವ ಕ್ಯಾಪ್ಟನ್ ಸ್ಮಿತ್ ಪ್ರಸ್ತುತ ಯುಎಇಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.ಯುಎಇಯಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪೈಲಟ್ ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದು, ಸ್ಮಿತ್ ಅವರ ಮನೋಬಲ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.




