(ನ್ಯೂಸ್ ಕಡಬ) newskadaba.com, ಆ. 24. ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಕುಖ್ಯಾತ ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್ (35) ಪೊಲೀಸರ ವಶದಿಂದ ಪರಾರಿಯಾಗಲು ಯತ್ನಿಸಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಆರೋಪಿ ಅನುಜ್ ಪಾಟೀಲ್‌ನನ್ನು ಪೊಲೀಸರು ಹೆಬ್ರಿಗೆ ಕರೆದೊಯ್ಯುತ್ತಿದ್ದಾಗ ಆತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಕೊಲ್ಲೂರು ಪಿಎಸ್‌ಐ ಅವರ ಶಸ್ತ್ರಾಸ್ತ್ರ ಕಸಿದುಕೊಂಡು ಗುಂಡು ಹಾರಿಸಲು ಯತ್ನಿಸಿದಾಗ, ಕುಂದಾಪುರ ಪಿಎಸ್‌ಐ ನಂಜ ನಾಯಕ್ ಅವರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.
ಕಾಲಿಗೆ ಗುಂಡು ತಗುಲಿ ಗಾಯಗೊಂಡಿರುವ ಅನುಜ್ ಪಾಟೀಲ್‌ನನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.ಡೇವಿಡ್ ಡಿಸೋಜಾ ಕೊಲೆಗೆ ಶೂಟರ್‌ಗಳ ತಂಡವನ್ನು ನಿಯೋಜಿಸಿ, ಕಾರ್ಯಾಚರಣೆಗೆ ಅಗತ್ಯವಾದ ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡಿದ್ದ ಪ್ರಮುಖ ಆರೋಪ ಈತನ ಮೇಲಿದೆ.
ಬಿಹಾರ ಮೂಲದ ಈತ ಮುಂಬೈನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, .ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಹಾಗೂ ದಮನ್-ದಿಯು ಸೇರಿದಂತೆ ವಿವಿಧೆಡೆ ಈತನ ವಿರುದ್ಧ ಒಟ್ಟು 11 ಕ್ರಿಮಿನಲ್ ಪ್ರಕರಣಗಳಿದ್ದು, ಇದರಲ್ಲಿ 10 ಪ್ರಕರಣಗಳು ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿವೆ.








