(ನ್ಯೂಸ್ ಕಡಬ) newskadaba.com ,ಆ.06 ಕಡಬ: ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಸಮರ್ಪಕ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ರೋಗಿಗಳಿಗೆ ಅಗತ್ಯ ಮೂಲಭೂತ ವೈದ್ಯಕೀಯ ತಪಾಸಣೆ ನಡೆಸದೆ ಔಷಧಿ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಕೋಡಿಂಬಾಳದ ವ್ಯಕ್ತಿಯೊಬ್ಬರಿಗೆ ಜ್ವರ ಹಾಗೂ ದೈಹಿಕ ಬಳಲಿಕೆಯ ಲಕ್ಷಣಗಳಿದ್ದರೂ ಯಾವುದೇ ಮೂಲಭೂತ ಪರೀಕ್ಷೆ ನಡೆಸದೆ ಔಷಧಿ ನೀಡಲಾಗಿದ್ದು, ಬಳಿಕ ಜಿಲ್ಲಾ ಆರೋಗ್ಯಾಧಿಕಾರಿಗಳ ಮಧ್ಯಪ್ರವೇಶದ ನಂತರ ನಡೆಸಿದ ಪರೀಕ್ಷೆಯಲ್ಲಿ ಎದೆಯ ಸೋಂಕು ಪತ್ತೆಯಾಗಿ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಆಗಸ್ಟ್ 4ರಂದು ನಡೆದ ಕಡಬ ತಾಲೂಕು ಮಟ್ಟದ ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆಯಲ್ಲಿಯೂ ಆಸ್ಪತ್ರೆಯ ಕಲಿಕಾ ವೈದ್ಯರು ರೋಗಿಗಳಿಗೆ ತಕ್ಷಣ ಸ್ಪಂದಿಸುತ್ತಿಲ್ಲ ಎಂಬ ವಿಷಯ ಪ್ರಸ್ತಾಪವಾಗಿತ್ತು. ಈ ವೇಳೆ ಆಸ್ಪತ್ರೆಯ ವೈದ್ಯರಾದ ಡಾ. ಮಂಜುನಾಥ್ ಅವರು, “ಯಾವುದೇ ದೂರುಗಳಿದ್ದರೆ ನನ್ನ ಗಮನಕ್ಕೆ ತನ್ನಿ” ಎಂದು ಭರವಸೆ ನೀಡಿದ್ದರು. ಆದರೆ, ಅದರ ಮರುದಿನವೇ ಇದೇ ರೀತಿಯ ಘಟನೆ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಕೋಡಿಂಬಾಳದ ಪ್ರಕಾಶ್ ಎಂಬವರು ತೀವ್ರ ಜ್ವರ ಹಾಗೂ ದೈಹಿಕ ಆಯಾಸದ ಹಿನ್ನೆಲೆಯಲ್ಲಿ ಆಗಸ್ಟ್ 5ರಂದು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ತೆರಳಿದ್ದರು. ಕರ್ತವ್ಯದಲ್ಲಿದ್ದ ಕಲಿಕಾ ವೈದ್ಯರು ದೇಹದ ಉಷ್ಣಾಂಶವನ್ನು ಅಳೆಯದೆ, ಸ್ಟೆಥಸ್ಕೋಪ್ ಬಳಸಿ ಎದೆ ಅಥವಾ ಉಸಿರಾಟವನ್ನು ಪರೀಕ್ಷಿಸದೆ, ರೋಗಿ ಹೇಳಿದ ಲಕ್ಷಣಗಳ ಆಧಾರದ ಮೇಲೆಯೇ ಮಾತ್ರೆ ಯನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ವೈದ್ಯಕೀಯ ತಪಾಸಣೆಯಲ್ಲಿನ ಈ ಲೋಪವನ್ನು ಪ್ರಕಾಶ್ ಅವರು ತಕ್ಷಣವೇ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹಿರಿಯ ಅಧಿಕಾರಿಗಳಿಂದ ಆಸ್ಪತ್ರೆಗೆ ಮಾಹಿತಿ ತಲುಪಿದ ಬಳಿಕ ಆಸ್ಪತ್ರೆಯ ಸಿಬ್ಬಂದಿ ತಕ್ಷಣವೇ ಎದೆಯ ಎಕ್ಸ್-ರೇ ಹಾಗೂ ರಕ್ತ ಪರೀಕ್ಷೆ ನಡೆಸಿದ್ದಾರೆ.ಪರೀಕ್ಷೆಯ ವರದಿಯಲ್ಲಿ ಎದೆಯಲ್ಲಿ ಸೋಂಕು ಹಾಗೂ ರಕ್ತದ ಪ್ರಮಾಣದಲ್ಲಿ ವ್ಯತ್ಯಾಸವಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅಗತ್ಯ ಔಷಧಿಗಳನ್ನು ನೀಡಿ ಚಿಕಿತ್ಸೆ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.
“ಅರಿವಿರುವವರು ಅಥವಾ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿರುವವರು ತಮ್ಮ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಬಹುದು. ಆದರೆ ಪ್ರತಿದಿನ ಆಸ್ಪತ್ರೆಗೆ ಬರುವ ಬಡ ಹಾಗೂ ಗ್ರಾಮೀಣ ಪ್ರದೇಶದ ಸಾಮಾನ್ಯ ಜನರಿಗೆ ಇಂತಹ ನಿರ್ಲಕ್ಷ್ಯವಾದರೆ ಅವರ ಪರಿಸ್ಥಿತಿ ಏನಾಗಬೇಕು? ಸರಿಯಾದ ತಪಾಸಣೆಯಿಲ್ಲದೆ ಚಿಕಿತ್ಸೆ ನೀಡಿದರೆ ಸಂಭವಿಸಬಹುದಾದ ಅನಾಹುತಕ್ಕೆ ಹೊಣೆ ಯಾರು?” ಎಂದು ಪ್ರಕಾಶ್ ಪ್ರಶ್ನಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಪ್ರತಿಯೊಬ್ಬ ರೋಗಿಗೂ ಕನಿಷ್ಠ ಮೂಲಭೂತ ವೈದ್ಯಕೀಯ ತಪಾಸಣೆ ನಡೆಸಿ, ಆರೋಗ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ಸೂಕ್ತ ಚಿಕಿತ್ಸೆ ನೀಡುವುದನ್ನು ಕಡ್ಡಾಯಗೊಳಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.








