(ನ್ಯೂಸ್ ಕಡಬ) newskadaba.com ಜು. 15. ಫಿಫಾ ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸಿದ ಸ್ಪೇನ್ ತಂಡವು ಫೈನಲ್ ತಲುಪಿದೆ. ಇದರೊಂದಿಗೆ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ ನೇತೃತ್ವದ ಫ್ರಾನ್ಸ್ ತಂಡದ ವಿಶ್ವಕಪ್ ಕನಸು ಭಗ್ನಗೊಂಡಿದೆ. ಸ್ಪೇನ್ ತಂಡವು 2010ರ ಬಳಿಕ ಇದೇ ಮೊದಲ ಬಾರಿಗೆ (ಒಟ್ಟಾರೆ ಎರಡನೇ ಬಾರಿ) ಫಿಫಾ ವಿಶ್ವಕಪ್‌ನ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಂದ್ಯದ 20ನೇ ನಿಮಿಷದಲ್ಲಿ ಲಾಮಿನ್ ಯಮಾಲ್ ಮೇಲಿನ ಫೌಲ್ಗಾಗಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಮೈಕೆಲ್ ಒಯರ್ಜಾಬಲ್ ಗೋಲಾಗಿ ಪರಿವರ್ತಿಸಿ ಸ್ಪೇನ್ಗೆ 1-0 ಮುನ್ನಡೆ ತಂದುಕೊಟ್ಟರು. ಈ ಗೋಲಿನೊಂದಿಗೆ ಅವರು ಒಂದೇ ವಿಶ್ವಕಪ್ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಡೇವಿಡ್ ವಿಲ್ಲಾ ಅವರ ಸ್ಪೇನ್ ದಾಖಲೆಯನ್ನು ಸರಿದೂಗಿಸಿದರು. ಬಳಿಕ 58ನೇ ನಿಮಿಷದಲ್ಲಿ ಪೆಡ್ರೊ ಪೊರ್ರೊ ಮತ್ತೊಂದು ಗೋಲು ಬಾರಿಸಿ ತಂಡದ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.
ಮೊದಲಾರ್ಧದಲ್ಲೇ ಪ್ರಮುಖ ಡಿಫೆಂಡರ್ ವಿಲಿಯಂ ಸಾಲಿಬಾ ಗಾಯಗೊಂಡು ಹೊರನಡೆದದ್ದು ಫ್ರಾನ್ಸ್ಗೆ ಭಾರಿ ಹಿನ್ನಡೆಯಾಯಿತು. ಎಂಬಾಪೆ, ಡೆಂಬೆಲೆ ಅವರಂತಹ ಸ್ಟಾರ್ ಆಟಗಾರರಿದ್ದರೂ ಫ್ರಾನ್ಸ್ಗೆ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇನ್ನು ವಿಶ್ವಕಪ್ ಸೆಮಿಫೈನಲ್ ಇತಿಹಾಸದಲ್ಲೇ ಇಬ್ಬರು ಹದಿಹರೆಯದ ಆಟಗಾರರನ್ನು (ಲಾಮಿನ್ ಯಮಾಲ್ ಮತ್ತು ಪೌ ಕುಬಾರ್ಸಿ) ಆರಂಭಿಕ ಇಲೆವೆನ್ನಲ್ಲಿ ಕಣಕ್ಕಿಳಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಸ್ಪೇನ್ ಬರೆಯಿತು. ಭಾನುವಾರ ನಡೆಯಲಿರುವ ಮಹಾ ಫೈನಲ್ನಲ್ಲಿ ಸ್ಪೇನ್ ತಂಡವು ಇಂಗ್ಲೆಂಡ್ ಅಥವಾ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.















