ಎಸ್.ಸಿ/ಎಸ್.ಟಿ ಸ್ಟಾರ್ಟ್ ಅಪ್ ಗಳಿಗೆ ಅನುದಾನ



(ನ್ಯೂಸ್ ಕಡಬ) newskadaba.com ಜು. 15. ಇಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ((E ,IT & BT), ಕರ್ನಾಟಕ ಸರ್ಕಾರವು ಪರಿಶಿಷ್ಟಜಾತಿ (SC) ಹಾಗೂ ಪರಿಶಿಷ್ಟಪಂಗಡಗಳು (ST) ಉದ್ಯಮಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ““ELEVATE ಉನ್ನತಿ 2026” ಎಂಬ ಅನುದಾನ ಕಾರ್ಯಕ್ರಮವನ್ನು ಘೋಷಿಸಿದೆ. ಈ ಕಾರ್ಯಕ್ರಮದಡಿ ಆಯ್ಕೆಯಾದ ಸ್ಟಾರ್ಟ್‍ ಅಪ್‍ಗಳಿಗೆ ಗರಿಷ್ಠ ರೂ. 50 ಲಕ್ಷಗಳವರೆಗೆ ಅನುದಾನ ನೀಡಲಾಗುತ್ತದೆ.







ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ ಸೈಟ್ https://eitbt.karnataka.gov.in ಭೇಟಿ ನೀಡಬಹುದು. ಜುಲೈ 15 ಸಂಜೆ 5  ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು.






ಅರ್ಹತಾ ಮಾನದಂಡಗಳು:  ಕರ್ನಾಟಕದಲ್ಲಿ ನೋಂದಾಯಿತ ಅಥವಾ ಸಂಯೋಜಿಸಲ್ಪಟ್ಟ ಕಛೇರಿ ಹೊಂದಿರಬೇಕು (ಪ್ರೈವೇಟ್ ಲಿಮಿಟೆಡ್ / ಒಪಿಸಿ (ಪ್ರೈ.ಲಿ)/ ಎಲ್.ಎಲ್.ಪಿ / ಪಾಲುದಾರಿಕೆ ಸಂಸ್ಥೆಗಳು, ರಾಜ್ಯ ಅಥವಾ ಬಹು ರಾಜ್ಯ ಸಹಕಾರಿ ಸಂಸ್ಥೆಗಳು).(ಕಂಪನಿಗಳ ಕಾಯ್ದೆ, 2013 ರಲ್ಲಿ ವ್ಯಾಖ್ಯಾನಿಸಿದಂತೆ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ),(ಪಾಲುದಾರಿಕೆ ಕಾಯ್ದೆ, 1932 ರ ಸೆಕ್ಷನ್ 59 ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ) ಪಾಲುದಾರಿಕೆ ಸಂಸ್ಥೆಯಾಗಿ ಅಥವಾ (ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯ್ದೆ, 2008 ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ) ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಯಾಗಿ, (ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ, 2002 ರ ಅಡಿಯಲ್ಲಿ ಸಹಕಾರ ಸಂಘಗಳ ಕೇಂದ್ರ ನೋಂದಣಾಧಿಕಾರಿಯಲ್ಲಿ ನೋಂದಾಯಿಸಲ್ಪಟ್ಟ ಬಹು-ರಾಜ್ಯ ಸಹಕಾರ ಸಂಘ, ಅಥವಾ ಭಾರತದಲ್ಲಿನ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸಹಕಾರ ಸಂಘಗಳ ಕಾಯ್ದೆಯಡಿ ಆಯಾ ಸಹಕಾರ ಸಂಘಗಳ ನೋಂದಣಾಧಿಕಾರಿಯಲ್ಲಿ ನೋಂದಾಯಿಸಲ್ಪಟ್ಟ ಸಹಕಾರ ಸಂಘ) ರಾಜ್ಯ ಅಥವಾ ಬಹು ರಾಜ್ಯ ಸಹಕಾರಿ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟಿರಬೇಕು.
ನೋಂದಾಯಿತ ದಿನಾಂಕದಿಂದ ವಹಿವಾಟಿನ ಒಟ್ಟು ಆದಾಯ ರೂ. 200.00 ಕೋಟಿಗಿಂತ ಕಡಿಮೆಯಿರಬೇಕು. ನವೋದ್ಯಮಗಳು ಅರ್ಜಿ ಆಹ್ವಾನಗೊಂಡ ದಿನಾಂಕ ಅಥವಾ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದವರೆಗೆ 10 ವರ್ಷಗಳನ್ನು ಮೀರಿರಬಾರದು. ನವೋದ್ಯಮಗಳು ಉತ್ಪನ್ನ/ಸೇವೆಗಳ ತಂತ್ರಜ್ಞಾನಗಳ ಅಭಿವೃದ್ಧಿ ಅಥವಾ ಸುಧಾರಣೆ, ಉದ್ಯೋಗ ಸೃಷ್ಟಿ ಅಥವಾ ಸಂಪತ್ತಿನ ಸೃಷ್ಟಿಯ ಸಾಮರ್ಥ್ಯವನ್ನು ಹೊಂದಿರುವ ಲಾಭದಾಯಕ ವ್ಯವಹಾರ ಮಾದರಿಯಾಗಿರಬೇಕು. ನಿರ್ದೇಶಕರು/ಪಾಲುದಾರರು ಪ.ಜಾ/ಪ.ಪಂ ಸಮುದಾಯಕ್ಕೆ ಸೇರಿರಬೇಕು ಮತ್ತು ಅಂತಹ ಪ.ಜಾ/ಪ.ಪಂ ಸದಸ್ಯರು ಕಂಪನಿ/ ಸಂಸ್ಥೆಯಲ್ಲಿ ಕನಿಷ್ಠ ಶೇಕಡ 70 ರಷ್ಟು ಈಕ್ವಿಟಿ (ಷೇರುಗಳನ್ನು) ಹೊಂದಿರಬೇಕು. ಅರ್ಜಿ ಸಲ್ಲಿಸಿದ ದಿನಾಂಕದಿಂದ ಹಾಗೂ ಯೋಜನೆಯ ಸಂಪೂರ್ಣ ಅವಧಿಯಲ್ಲಿ ಷೇರುದಾರರ ಮಾದರಿಯು ಈ ನಿಯಮದಂತೆ ಬದ್ದವಾಗಿರಬೇಕು. ಈ ಷರತ್ತನ್ನು ಉಲ್ಲಂಘಿಸುವ ಅಥವಾ ಯಾವುದೇ ಮಾಲೀಕತ್ವದ (dilution) ಬದಲಾವಣೆಯು ಸಂಭವಿಸಿದಲ್ಲಿ, ಅರ್ಹತೆಯನ್ನು ರದ್ದುಗೊಳಿಸಲಾಗುವುದು ಹಾಗೂ ಅಮಾನ್ಯಗೊಳಿಸಲಾಗುತ್ತದೆ. ಪ.ಜಾ / ಪ.ಪಂ ನಿರ್ದೇಶಕರು/ಪಾಲುದಾರರು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ನೀಡಲಾದ ಆರ್‍.ಡಿ ಸಂಖ್ಯೆಯೊಂದಿಗೆ ಡಿಜಿಟಲ್ ಜಾತಿ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top