(ನ್ಯೂಸ್ ಕಡಬ) newskadaba.com ಮಂಗಳೂರು, ಜು. 13. 2026-27 ನೇ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ವಿಭಾಗಗಳು, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಹಾಗೂ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರಗಳಲ್ಲಿರುವ ಪಿಹೆಚ್.ಡಿ ಕಾರ್ಯಕ್ರಮಗಳ ಲಭ್ಯವಿರುವ ಸೀಟುಗಳಿಗೆ ನೋಂದಾಯಿಸಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ದ್ವಿಪ್ರತಿಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆಯನ್ನು ವಿವರವಾದ ಅಧಿಸೂಚನೆಯೊಂದಿಗೆ ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ-574199 ಅಥವಾ ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟ, ಮಂಗಳೂರು ಇವರಿಂದ ರೂ 1,500 ನ್ನು (ಎಸ್.ಸಿ/ಎಸ್.ಟಿ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ ರೂ.750/-) ಚಲನ್/ ರಾಷ್ಟ್ರೀಕೃತ ಬ್ಯಾಂಕಿನಿಂದ ಹಣಕಾಸು ಅಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯ ಇವರ ಹೆಸರಿನಲ್ಲಿ ಪಡೆದ ಡಿಡಿ ಮುಖಾಂತರ ಪಾವತಿಸಿ ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗದ ಅಧ್ಯಕ್ಷರು/ ಪ್ರಾಂಶುಪಾಲರು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು/ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರದ ಮುಖ್ಯಸ್ಥರಿಗೆ ಆಗಸ್ಟ್ 7 ರೊಳಗಡೆ ಸಲ್ಲಿಸಬೇಕು. ಖಾಲಿ ಇರುವ ಸೀಟುಗಳು/ ಮೀಸಲಾತಿ ವಿವರ ಮತ್ತು ಪಿಹೆಚ್.ಡಿ ಕಾರ್ಯಕ್ರಮಗಳನ್ನು ನಿಯಂತ್ರಿಸುವ ನಿಯಮಾವಳಿ ಹಾಗೂ ಮಾರ್ಗಸೂಚಿಯ ವಿವರಗಳು ಮತ್ತು ಅರ್ಜಿ ನಮೂನೆಗಳಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವೆಬ್ಸೈಟ್ www.mangaloreuniversity.ac.in ನಿಂದ ಪಡೆದುಕೊಳ್ಳಬಹುದು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









