ಡಿಎಲ್ ಇಲ್ಲದ ನಿರ್ವಾಹಕನಿಂದ ಅಪಘಾತ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ: ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಪೊಲೀಸರ ಎಚ್ಚರಿಕೆ



(ನ್ಯೂಸ್‌ ಕಡಬ) newskadaba.com,  ಜು.07 ಇತ್ತೀಚೆಗೆ ಮಣಿಪಾಲದಲ್ಲಿ ನಡೆದ ಖಾಸಗಿ ಶಾಲಾ ಬಸ್ ಅಪಘಾತ ಹಾಗೂ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ, ಉಡುಪಿ ಮತ್ತು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಶಾಲಾ ವಾಹನಗಳ ದಿಢೀರ್ ತಪಾಸಣೆ ನಡೆಸಲಾಯಿತು. ಮಾನ್ಯ ಚಾಲನಾ ಪರವಾನಗಿ (DL) ಇಲ್ಲದ ನಿರ್ವಾಹಕನೊಬ್ಬ ಬಸ್ ಚಲಾಯಿಸಿದ್ದೇ ಮಣಿಪಾಲ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತನಿಖೆಯಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.







ಚಾಲಕರ ಚಾಲನಾ ಪರವಾನಗಿ (DL), ವಾಹನ ಫಿಟ್‌ನೆಸ್ ಪ್ರಮಾಣಪತ್ರ (FC), ವಿಮಾ ಪತ್ರಗಳು ಹಾಗೂ RTO ಪರವಾನಗಿ ಸೇರಿದಂತೆ ಎಲ್ಲಾ ಕಡ್ಡಾಯ ದಾಖಲೆಗಳನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದರು.ನಿಯಮಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗುತ್ತಿದೆಯೇ ಮತ್ತು ನಿಗದಿತ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಯಿತು.






ಶಾಲಾ ಮಕ್ಕಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಶಾಲಾ ಆಡಳಿತ ಮಂಡಳಿ ಹಾಗೂ ವಾಹನ ಮಾಲೀಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

error: Content is protected !!
Scroll to Top