ಹಸು ವಧೆ ಸಂಪೂರ್ಣ ನಿಷೇಧ ಆದೇಶಕ್ಕೆ ತಡೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ



(ನ್ಯೂಸ್‌ ಕಡಬ) newskadaba.com, ಜು.02:ಬಕ್ರೀದ್ ಸೇರಿದಂತೆ ಯಾವುದೇ ದಿನಗಳಲ್ಲಿ ಹಸು ಮತ್ತು ಕರುಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಸರ್ಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಮೂಲಕ ಈ ಅರ್ಜಿ ಸಲ್ಲಿಕೆಯಾಗಿದೆ.







ಕೊಯಂಬತ್ತೂರಿನ ಸಾರ್ವಜನಿಕ ಸ್ಥಳಗಳಲ್ಲಿ ಬಕ್ರೀದ್ ವೇಳೆ ಹಸು ವಧೆ ತಡೆಯುವ ಕುರಿತು ಮಾತ್ರ ಮೂಲ ಅರ್ಜಿ ಇತ್ತು. ಆದರೆ ಹೈಕೋರ್ಟ್ ತನ್ನ ವ್ಯಾಪ್ತಿ ಮೀರಿ ರಾಜ್ಯಾದ್ಯಂತ ಸಂಪೂರ್ಣ ನಿಷೇಧ ಹೇರಿದೆ.ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958 ಮತ್ತು ನಗರ ಸ್ಥಳೀಯ ಸಂಸ್ಥೆಗಳ ಕಾಯ್ದೆ 1998 ಹಸು ವಧೆಯನ್ನು ನಿಯಂತ್ರಿಸುತ್ತವೆಯೇ ಹೊರತು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ.






ಇಸ್ಲಾಂ ಧರ್ಮದಲ್ಲಿ ಹಸು ಬಲಿ ಅಗತ್ಯವೇ ಎಂಬ ವಿಷಯದ ಕುರಿತು ಹೈಕೋರ್ಟ್ ನಡೆಸಿರುವ ಚರ್ಚೆ ಅನಗತ್ಯ ಹಾಗೂ ಅರ್ಜಿಯ ವ್ಯಾಪ್ತಿಯಿಂದ ಹೊರಗಿದೆ.ಹೈಕೋರ್ಟ್ ತೀರ್ಪಿಗೆ ತಕ್ಷಣವೇ ತಡೆ ನೀಡಬೇಕು ಮತ್ತು ಆದೇಶವನ್ನು ರದ್ದುಗೊಳಿಸಬೇಕು ಎಂದು ವಕೀಲ ಜಯಶ್ರೀ ನರಸಿಂಹನ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ರಾಜ್ಯ ಸರ್ಕಾರ ಕೋರಿದೆ.

error: Content is protected !!
Scroll to Top