ನಿಯಂತ್ರಣ ತಪ್ಪಿ ಟ್ರಕ್‌ಗೆ ಡಿಕ್ಕಿ ಹೊಡೆದ ಲಕ್ಸುರಿ ಬಸ್ ಐವರು ಸಜೀವ ದಹನ, ಇಬ್ಬರು ಸ್ಥಳದಲ್ಲೇ ಮೃತ್ಯು



(ನ್ಯೂಸ್‌ ಕಡಬ) newskadaba.com,   ಜು.01::ರಾಜಸ್ಥಾನದ ದೌಸಾ ಜಿಲ್ಲೆಯ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಬಸ್‌ವೊಂದು ಟ್ರಕ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಏಳು ಮಂದಿ ಸಾವನ್ನಪ್ಪಿ, 15ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ.ಹರಿದ್ವಾರದಿಂದ ಮಧ್ಯಪ್ರದೇಶದ ಇಂದೋರ್‌ಗೆ ಹೊರಟಿದ್ದ ‘ಹ್ಯಾನ್ಸ್ ಟ್ರಾವೆಲ್ಸ್’ ಸಂಸ್ಥೆಗೆ ಸೇರಿದ ಬಸ್, ಕೊಲಾವಾ ಪೊಲೀಸ್ ಠಾಣಾ ವ್ಯಾಪ್ತಿಯ ದ್ವಾರಪುರ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ವೇಳೆ ಬಸ್‌ನಲ್ಲಿ ಒಟ್ಟು 39 ಪ್ರಯಾಣಿಕರಿದ್ದರು.







ದೌಸಾ ಪೊಲೀಸ್ ವರಿಷ್ಠಾಧಿಕಾರಿ ಪಿಯೂಷ್ ದೀಕ್ಷಿತ್ ನೀಡಿರುವ ಮಾಹಿತಿ ಪ್ರಕಾರ, ದುರಂತದಲ್ಲಿ ಐದು ಮಂದಿ ಸಜೀವ ದಹನಗೊಂಡಿದ್ದರೆ, ಇನ್ನಿಬ್ಬರು ತಲೆಗೆ ತೀವ್ರ ಗಾಯವಾಗಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಹೆಚ್ಚಿನವರು ಮಧ್ಯಪ್ರದೇಶದ ನಿವಾಸಿಗಳಾಗಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಪೊಲೀಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.






ಅಪಘಾತದಿಂದಾಗಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪೊಲೀಸರು ಪರ್ಯಾಯ ಮಾರ್ಗಗಳ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿಯಲು ತನಿಖೆ ಪ್ರಗತಿಯಲ್ಲಿದೆ.

error: Content is protected !!
Scroll to Top