(ನ್ಯೂಸ್ ಕಡಬ) newskadaba.com, ಜೂ.26 ಬಾಂಗ್ಲಾದೇಶದ ನಾಗರಿಕರಿಗೆ ಪ್ರವಾಸಿ ವೀಸಾ ವಿತರಣೆ ಪುನರಾರಂಭಿಸುವುದಾಗಿ ಭಾರತ ಸರ್ಕಾರ ಪ್ರಕಟಿಸಿದೆ.2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ರಾಜಕೀಯ ದಂಗೆ ಹಾಗೂ ಭಾರತೀಯ ರಾಯಭಾರ ಕಚೇರಿಗಳ ಮೇಲಿನ ದಾಳಿಯ ಬಳಿಕ, ಸುರಕ್ಷತೆಯ ದೃಷ್ಟಿಯಿಂದ ಕಳೆದ ಸುಮಾರು 2 ವರ್ಷಗಳಿಂದ ಪ್ರವಾಸಿ ವೀಸಾ ಸೇವೆಗಳನ್ನ ಸ್ಥಗಿತಗೊಳಿಸಲಾಗಿತ್ತು.
ಇದೀಗ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ಜನರ ನಡುವಿನ ಸಂಪರ್ಕ ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಜೂನ್ 28 ರಿಂದ ಪ್ರವಾಸಿ ವೀಸಾಗಳನ್ನ ಪುನರಾರಂಭಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಢಾಕಾದ ಜಮುನಾ ಪ್ಯೂಚರ್ ಪಾರ್ಕ್ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ಭಾರತದ ನೂತನ ಹೈಕಮಿಷನರ್ ದಿನೇಶ್ ತ್ರಿವೇದಿ ಅವರು, “ಬಾಂಗ್ಲಾದೇಶದ ನಾಗರಿಕರಿಗೆ ಜೂನ್ 28ರ ಭಾನುವಾರದಿಂದ ಸಾಮಾನ್ಯ ಪ್ರವಾಸಿ ವೀಸಾ ಸೇವೆಗಳು ಲಭ್ಯವಾಗಲಿವೆ. ಇದನ್ನು ಘೋಷಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ.
ಇದು ಉಭಯ ಸಾರ್ವಭೌಮ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಇದರೊಂದಿಗೆ ತುರ್ತು ವೀಸಾ ಹಾಗೂ ವೈದ್ಯಕೀಯ ವೀಸಾಗಳ ಸೇವೆಯನ್ನೂ ಮುಂದುವರಿಸುತ್ತೇವೆ” ಎಂದು ತಿಳಿಸಿದ್ದಾರೆ.”ಬಾಂಗ್ಲಾದೇಶದಾದ್ಯಂತ ಢಾಕಾ, ರಾಜ್‌ಶಾಹಿ, ಚಿತ್ತಗಾಂಗ್, ಸಿಲ್ಹೆಟ್ ಮತ್ತು ಖುಲ್ನಾದಲ್ಲಿ ಭಾರತ 5 ವೀಸಾ ಕೇಂದ್ರಗಳನ್ನ ಒಳಗೊಂಡಿದೆ. ಭವಿಷ್ಯದಲ್ಲಿ ಇದನ್ನು ಮತ್ತಷ್ಟು ವಿಸ್ತರಿಸಲಾಗುವುದು” ಎಂದಿದ್ದಾರೆ.









