(ನ್ಯೂಸ್ ಕಡಬ) newskadaba.com, ಜೂ.11 ಮಂಗಳೂರು: ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬೀಚ್‌ಗಳಾದ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ ಹಾಗೂ ಮೂಲ್ಕಿಯ ಸಸಿಹಿತ್ತು ಮುಂಡಾ ಬೀಚ್‌ಗಳಲ್ಲಿ ಸಮುದ್ರಕ್ಕೆ ಇಳಿಯುವುದನ್ನು ಮತ್ತು ಎಲ್ಲಾ ರೀತಿಯ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಪ್ರವಾಸಿಗರ ರಕ್ಷಣೆಗಾಗಿ ಪಣಂಬೂರು ಬೀಚ್‌ನಲ್ಲಿ ಕೆಂಪು ಹಗ್ಗ ಹಾಗೂ ಅಪಾಯದ ಮುನ್ಸೂಚನೆ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.ಲೈಫ್‌ಗಾರ್ಡ್‌ಗಳು ಮತ್ತು ಕರಾವಳಿ ಕಾವಲು ಪೊಲೀಸರು 24 ಗಂಟೆಗಳ ಕಾಲ ನಿಗಾ ವಹಿಸಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ದಡದಲ್ಲಿ ನಡೆಯುವ ಕುದುರೆ/ಒಂಟೆ ಸವಾರಿ ಹಾಗೂ ಆಹಾರ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.ಸಮುದ್ರ ತೀರಗಳಲ್ಲಿ ನಿರ್ಬಂಧ ಇರುವುದರಿಂದ ಪ್ರವಾಸಿಗರು ಮತ್ತು ಸಾಹಸಪ್ರಿಯರು ಚಾರ್ಮಾಡಿ, ಅಗುಂಬೆ ಭಾಗದ ಟ್ರೆಕ್ಕಿಂಗ್, ಜಲಪಾತಗಳು ಹಾಗೂ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿಯಂತಹ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ.









