(ನ್ಯೂಸ್ ಕಡಬ) newskadaba.com, ಜು.10 :ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ 11ನೇ ಮೈಲಿ ಸಮೀಪದಲ್ಲಿ ಅತಿ ವೇಗದಲ್ಲಿದ್ದ ಪೆಟ್ರೋಲ್ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್‌ನಲ್ಲಿ ತಕ್ಷಣವೇ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಸಮೀಪದಲ್ಲೇ ರಿವರ್ಸ್ ತೆಗೆಯುತ್ತಿದ್ದ ಹಾಲಿನ ಟ್ಯಾಂಕರ್‌ಗೂ ಬೆಂಕಿ ವ್ಯಾಪಿಸಿದ್ದು, ಎರಡೂ ವಾಹನಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಅದೃಷ್ಟವಶಾತ್, ಎರಡೂ ಲಾರಿಗಳ ಚಾಲಕರು ಸಮಯಪ್ರಜ್ಞೆ ಮೆರೆದು ವಾಹನದಿಂದ ಹೊರಗೆ ಜಿಗಿದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೇ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.









