ಮಂಗಳೂರು: ವಿಶ್ವ ಸೈಕಲ್ ದಿನಾಚರಣೆ



(ನ್ಯೂಸ್ ಕಡಬ) newskadaba.com ಜೂ. 10. ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇರಾ ಯುವ ಭಾರತ, ದಕ್ಷಿಣ ಕನ್ನಡ ವತಿಯಿಂದ ವಿಶ್ವ ಸೈಕಲ್ ದಿನಾಚರಣೆ- 2026ರ ಅಂಗವಾಗಿ “ಹಸಿರು ಭವಿಷ್ಯಕ್ಕಾಗಿ ಸೈಕ್ಲಿಂಗ್” ಎಂಬ ಧ್ಯೇಯವಾಕ್ಯದೊಂದಿಗೆ ಭವ್ಯ “ಸಂಡೇಸ್ ಆನ್ ಸೈಕಲ್” ಸೈಕಲ್ ಜಾಥಾವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ, ಎನ್‍ಎಸ್‍ಎಸ್ ಮಂಗಳೂರು ವಿಶ್ವವಿದ್ಯಾಲಯ, ಫ್ರೀಜಿಂಗ್ ಸನ್, ಮಂಗಳೂರು ಸೈಕ್ಲಿಂಗ್ ಕ್ಲಬ್, ಸುರತ್ಕಲ್ ಬೀಚ್ ರನ್ನರ್ಸ್ ಹಾಗೂ ವಿ ಆರ್ ಸೈಕ್ಲಿಂಗ್ ಕ್ಲಬ್ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾಯಿತು. ಯುವಜನರಲ್ಲಿ ಆರೋಗ್ಯಕರ ಜೀವನಶೈಲಿ, ದೈಹಿಕ ಕ್ಷಮತೆ, ಪರಿಸರ ಸಂರಕ್ಷಣೆ ಹಾಗೂ ಯುವ ಸಬಲೀಕರಣದ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ನಗರದ ಮಂಗಳಾ ಕ್ರೀಡಾಂಗಣದಿಂದ ಸೈಕಲ್ ಜಾಥಾಕ್ಕೆ ಚಾಲನೆ ನೀಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಉದ್ಘಾಟಿಸಿ ಮಾತನಾಡಿ, ಆರೋಗ್ಯಕರ ಜೀವನಕ್ಕಾಗಿ ಸೈಕ್ಲಿಂಗ್ ಅತ್ಯಂತ ಪರಿಣಾಮಕಾರಿ ಸಾಧನವಾಗಿದ್ದು, ಪರಿಸರ ಸಂರಕ್ಷಣೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೇರಾ ಯುವ ಭಾರತ ಉಪನಿರ್ದೇಶಕ ಉಲ್ಲಾಸ್ ಕೆ.ಟಿ.ಕೆ. ಮಾತನಾಡಿ, ಯುವಜನರ ಉತ್ಸಾಹವನ್ನು ಶ್ಲಾಘಿಸಿದರು. ವಿವಿಧ ಸಂಘ-ಸಂಸ್ಥೆಗಳ ಸಹಕಾರವನ್ನು ಅಭಿನಂದಿಸಿ, ಆರೋಗ್ಯವಂತ ಹಾಗೂ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಸೈಕ್ಲಿಂಗ್ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಇಂತಹ ಆರೋಗ್ಯ ಮತ್ತು ರಾಷ್ಟ್ರ ನಿರ್ಮಾಣದ ಚಟುವಟಿಕೆಗಳಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೈ ಭಾರತ್ ಪ್ರತಿನಿಧಿ ಜಗದೀಶ್ ಕೆ., ಮಂಗಳೂರು ವಿಶ್ವವಿದ್ಯಾಲಯ ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜಕ ಶೇಷಪ್ಪ ಅಮೀನ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಫ್ರೀಜಿಂಗ್ ಸನ್ ಪ್ರತಿನಿಧಿಗಳು ಪರಾಂಜಲಿ ಹಾಗೂ ಶ್ರೀಮತಿ ಮಾರಿಯಾ, ಚಲನಚಿತ್ರ ನಟ ದಿನೇಶ್ ಅತ್ತಾವರ, ಮಂಗಳೂರು ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಅನಿಲ್ ಶೆಟ್, ವಿ ಆರ್ ಸೈಕ್ಲಿಂಗ್ ಕ್ಲಬ್ ಪ್ರತಿನಿಧಿ ಹರ್ನಿಶ್, ರಾಷ್ಟ್ರೀಯ ಮಟ್ಟದ ಸೈಕ್ಲಿಸ್ಟ್ ಹಾರ್ದಿಕ್ ರೈ  ಮತ್ತಿತರರು ಉಪಸ್ಥಿತರಿದ್ದರು.
ಸೈಕಲ್ ಜಾಥಾದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ನೂರಾರು ಮಂದಿ ಉತ್ಸಾಹದಿಂದ ಭಾಗವಹಿಸಿದರು. ಪರಿಸರ ಸ್ನೇಹಿ ಜೀವನಶೈಲಿ ಹಾಗೂ ಸುಸ್ಥಿರ ಭವಿಷ್ಯದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಈ ಜಾಥಾ ಆಯೋಜಿಸಲಾಗಿತ್ತು.
ಮಂಗಳಾ ಕ್ರೀಡಾಂಗಣದಿಂದ ಆರಂಭವಾದ ಜಾಥಾ ನಗರದ ಪ್ರಮುಖ ಪ್ರದೇಶಗಳಾದ ಕಾರ್‍ಸ್ಟ್ರೀಟ್, ಕ್ಲಾಕ್ ಟವರ್, ಪಿವಿಎಸ್ ಸರ್ಕಲ್, ಲಾಲ್‍ ಬಾಗ್ ಹಾಗೂ ಲೇಡಿಹಿಲ್ ಮಾರ್ಗವಾಗಿ ಸಂಚರಿಸಿ ಬಳಿಕ ಮಂಗಳಾ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಿತು. ಭಾಗವಹಿಸಿದವರು “ಫಿಟ್ ಇಂಡಿಯಾ” ಅಭಿಯಾನ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.







error: Content is protected !!
Scroll to Top