(ನ್ಯೂಸ್ ಕಡಬ) newskadaba.com, ಜೂ.10 ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಎಂ.ಜೆ.ಎಂ ಮಸೀದಿಯಲ್ಲಿ ಮಂಗಳವಾರ ಸಂಜೆ ಅಸರ್ ನಮಾಜ್‌ಗಾಗಿ ಅಝಾನ್ ಮೊಳಗಿಸುತ್ತಿದ್ದ ವೇಳೆ ಮೌಲ್ವಿಯೊಬ್ಬರು ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮೃತರನ್ನು ಮಂಗಳೂರು ಮೂಲದ ಕುಕ್ಕಾಜೆಯ ಅಬ್ದುಲ್ ಲತೀಫ್ ಮದನಿ ಎಂದು ಗುರುತಿಸಲಾಗಿದೆ. ಇವರು ಕಳೆದ ಆರು ತಿಂಗಳಿನಿಂದ ಈ ಮಸೀದಿಯಲ್ಲಿ ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದರು.
ಅಝಾನ್ ಹೇಳುತ್ತಿದ್ದಾಗಲೇ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ತಕ್ಷಣವೇ ಅವರನ್ನು ಹೊನ್ನಾವರದ ಸೆಂಟ್ ಇಗ್ನೇಶಿಯಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಆಸ್ಪತ್ರೆ ತಲುಪುವ ಮುನ್ನವೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮೌಲ್ವಿಯವರ ಕೊನೆಯ ಕ್ಷಣಗಳು ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪವಿತ್ರ ಪ್ರಾರ್ಥನೆಯ ವೇಳೆಯೇ ಸಂಭವಿಸಿದ ಈ ಸಾವು ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.









